ಪಿಕಾರ್ಡ್ ಬ್ಯಾಂಕ್ ಅವ್ಯವಹಾರ ತನಿಖೆ ನಡೆಸಿ

ಕೊಪ್ಪಳ: ಯಲಬುರ್ಗಾ ಪಿಕಾರ್ಡ್ ಬ್ಯಾಂಕ್ ಅವ್ಯವಹಾರ ಪ್ರಕರಣ ಕುರಿತು ತನಿಖೆ ನಡೆಸುವಂತೆ ಸಿಎಂ ಕುಮಾರಸ್ವಾಮಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ತಾಲೂಕಿನ ಬಸಾಪುರ ಬಳಿಯ ಖಾಸಗಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕೆಲ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರು, ಆಡಳಿತ ಮಂಡಳಿಯವರು ರೈತರ ಹೆಸರಿನಲ್ಲಿ ಹಣ ಎತ್ತುವಳಿ ಮಾಡಿಕೊಂಡು ಮಜಾ ಮಾಡುತ್ತಿದ್ದಾರೆ. ಹೀಗಾಗಿ ಕೆಲ ಷರತ್ತು ವಿಧಿಸಿ ಸಾಲಮನ್ನಾ ಯೋಜನೆ ಜಾರಿಗೊಳಿಸಲಾಗಿದೆ. ಯಲಬುರ್ಗಾ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದ್ದರೆ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪಕ್ಕದಲ್ಲಿದ್ದ ಡಿಸಿ ಪಿ.ಸುನಿಲ್‌ಕುಮಾರ್‌ಗೆ ಸೂಚಿಸಿದರು. ಯಾರೇ ಆಗಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎಸ್ಪಿ ರೇಣುಕಾ ಸುಕುಮಾರ, ಜಿಪಂ ಸಿಇಒ ವೆಂಕಟರಾಜಾ ಸೇರಿ ಇತರ ಅಧಿಕಾರಿಗಳು, ಕಾಂಗ್ರೆಸ್, ಜೆಡಿಎಸ್ ಮುಖಂಡರಿದ್ದರು.

ಕಾರ್ಯಕರ್ತರ ಕಿತ್ತಾಟ: ಸಿಎಂ ಕುಮಾರಸ್ವಾಮಿ ಬಾಗಲಕೋಟೆ ಪ್ರವಾಸ ಕೈಗೊಂಡಿದ್ದು, ಬೆಂಗಳೂರಿನಿಂದ ಕೊಪ್ಪಳಕ್ಕೆ ವಿಮಾನದಲ್ಲಿ ಆಗಮಿಸಿದ್ದರು. ಬಳಿಕ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ತೆರಳುವುದು ನಿಶ್ಚಿತವಾಗಿತ್ತು. ಆದರೆ, ಸಿಎಂ ಆಗಮನ ಕುರಿತು ಕೆಲ ಜೆಡಿಎಸ್ ಕಾರ್ಯಕರ್ತರಿಗೆ ಮಾಹಿತಿ ಇರಲಿಲ್ಲವೆಂದು ಆರೋಪಿಸಿ ಕೆಲವರು ನಿಲ್ದಾಣದಲ್ಲೇ ಏರುಧ್ವನಿಯಲ್ಲಿ ಮಾತನಾಡಿದರು. ಕೆಲವರನ್ನು ಪೊಲೀಸರು ಒಳಗೆ ಬಿಡದ ಕಾರಣ ಕೂಗಾಡಿದರು.

ಸಿಎಂಗೆ ದಢೇಸೂಗೂರು ಮನವಿ: ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ತಮ್ಮ ಕ್ಷೇತ್ರದಲ್ಲಿ ಬರಗಾಲ ತೀವ್ರವಾಗಿದ್ದು, ಕುಡಿವ ನೀರಿನ ಕೊರತೆಯಾಗಿದೆ. ಸರ್ಕಾರ 50 ಲಕ್ಷ ರೂ. ಬಿಡುಗಡೆ ಮಾಡಿದ್ದು, ಇನ್ನೂ ಹೆಚ್ಚಿನ ಅನುದಾನ ಅವಶ್ಯಕತೆಯಿದೆ. ಹೀಗಾಗಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು 50ಕ್ಕೂ ಹೆಚ್ಚು ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ಸಿಎಂ ಕುಮಾರಸ್ವಾಮಿಗೆ ಸಲ್ಲಿಸಿದರು. ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಸಿಎಂ ಜಿಲ್ಲಾಧಿಕಾರಿಗೆ ಸ್ಥಳದಲ್ಲೇ ಸೂಚಿಸಿದರು.