ಅಂತ್ಯಸಂಸ್ಕಾರಕ್ಕೂ ಮುನ್ನ ಕಣ್ಣು ಬಿಟ್ಟ ಮೃತೆ ಎಂದು ಘೋಷಿಸಿದ್ದ ಮಹಿಳೆ: ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಕೊಪ್ಪಳ: ಮಹಿಳೆಗೆ ಜೀವ ಇರುವಾಗಲೇ ಮೃತಪಟ್ಟಿದ್ದಾಳೆ ಎಂದು ಘೋಷಿಸಿ ಎಡವಟ್ಟು ಮಾಡಿಕೊಂಡಿರುವ ವೈದ್ಯರ ವಿರುದ್ಧ ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಕೊಪ್ಪಳದ ಕೆ.ಎಸ್.ಆಸ್ಪತ್ರೆಯಲ್ಲಿ ನಡೆದಿದೆ.

ಮಂಜುನಾಥ ಕುಂಬಾರ ಎಂಬುವರ ಪತ್ನಿ ಕವಿತಾ ಅವರು ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಳ್ಳುವಾಗ ರಕ್ತಸ್ರಾವ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಸ್.ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನ ಚಿಕಿತ್ಸೆ ನೀಡಿ ಸೋಮವಾರ ರಾತ್ರಿ ಕವಿತಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಹೀಗಾಗಿ ಕವಿತಾ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು.

ಅಂತಿಮ ಕಾರ್ಯಕ್ಕಾಗಿ ಮೃತದೇಹವನ್ನು ಎತ್ತಿಕೊಳ್ಳುವಷ್ಟರಲ್ಲಿ ಕವಿತಾ ಕಣ್ಣು ಬಿಟ್ಟಿದ್ದಾಳೆ. ಇದರಿಂದ ಒಂದು ಕ್ಷಣ ಆಘಾತಕ್ಕೆ ಒಳಗಾದ ಕುಟುಂಬಸ್ಥರು, ವೈದ್ಯರ ನಿರ್ಲಕ್ಷ್ಯವನ್ನು ವಿರೋಧಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತ್ಯಸಂಸ್ಕಾರಕ್ಕೆಂದು ಬಂದಿದ್ದ ಸಂಬಂಧಿಕರು ಕೂಡ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು, ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಉಂಟಾಗಿರುವುದರಿಂದ ಪೊಲೀಸ್​ ಬಂದೋಬಸ್ತ್​ ನೀಡಲಾಗಿದೆ. ಗಾಯಾಳುವಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *