ಪಶು ವೈದ್ಯರ ಮೇಲಿನ ಹಲ್ಲೆಗೆ ಖಂಡನೆ

ಕರ್ತವ್ಯ ಬಹಿಷ್ಕರಿಸಿ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

ಕೊಪ್ಪಳ: ಜಿಲ್ಲೆಯಲ್ಲಿ ಪಶು ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪಶುಪಾಲನಾ ಇಲಾಖೆ ಸಿಬ್ಬಂದಿ ಕರ್ತವ್ಯ ಬಹಿಷ್ಕರಿಸಿ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಪಶು ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮೇಲೆ ಪದೇ ಪದೆ ಹಲ್ಲೆ ನಡೆಯುತ್ತಿವೆ. ಹನುಮೇಶ ಜಂತ್ಲಿ, ಹನುಮಂತಪ್ಪ ಚಿಂಚಲಿ ಸೇರಿ ಇತರರು ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸುವುದಲ್ಲದೆ ಹಲ್ಲೆ ನಡೆಸುತ್ತಿದ್ದಾರೆ. ಈ ಹಿಂದೆ ಇದೇ ರೀತಿ ವರ್ತನೆಗೆ ಸಂಬಂಧಿಸಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇತ್ತೀಚೆಗೆ ಕೊಪ್ಪಳ ತಾಲೂಕು ಪಶುವೈದ್ಯ ಶಿವರಾಜ ಶೆಟ್ಟರ್ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಕಚೇರಿಯಲ್ಲಿಯೇ ಕೂಡಿಹಾಕಲು ಯತ್ನಿಸಿದ್ದಾರೆ. ಘಟನೆ ಸಂಬಂಧ ಕೊಪ್ಪಳ ನಗರಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜಾನುವಾರುಗೆ ಚಿಕಿತ್ಸೆ ನೀಡಲೆಂದು ಪಶು ವೈದ್ಯರು ಒಬ್ಬೊಬ್ಬರೆ ಊರೂರು ಅಲೆಯುತ್ತಾರೆ. ಈ ವೇಳೆ ಹಲ್ಲೆ ನಡೆಸಿದರೆ ಜವಾಬ್ದಾರರು ಯಾರು ಎಂದು ವೈದ್ಯರು, ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.

ಎಡಿಸಿ ಶಾಹಿದಾ ಆಯೇಷಾಗೆ ಮನವಿ ಸಲ್ಲಿಸಿದರು. ಪಶುಪಾಲನಾ ಇಲಾಖೆ ಸಿಬ್ಬಂದಿ ಡಾ.ಶಿವರಾಜ ಶೆಟ್ಟರ್, ಡಾ.ಸುನಿಲ್ ಕುಮಾರ್, ಡಾ.ವಿನಯಕುಮಾರ್, ಅನಂತಕುಮಾರ್ ರಾಠೋಡ್, ಕಳಕಪ್ಪ ಬೆಟಗೇರಿ, ಶರಣಪ್ಪ ಗಾಳಿ, ಶರಣಪ್ಪ ಕೊರಗಲ್ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *