ತುಂಗಭದ್ರಾ ಜಲಾಶಯದ ನೀರು ಕಳ್ಳತನ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಕೊಪ್ಪಳ: ಈ ಭಾಗದಲ್ಲಿ ರೈತರ ಬೆಳೆಗೆ ಹಾಗೂ ಸಾರ್ವಜನಿಕರಿಗೆ ಕುಡಿಯಲು ತುಂಗಭದ್ರಾ ಜಲಾಶಯದ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಆದರೆ, ಸುತ್ತಮುತ್ತಲ ಕಾರ್ಖಾನೆಗಳಿಗೆ ಮಾತ್ರ ಯಥೇಚ್ಛವಾಗಿ ನೀರು ಸಿಗುತ್ತಿದ್ದು, ಹೀಗಾಗಿ ಇಲ್ಲಿ ನೀರು ಕಳ್ಳತನದ ಆರೋಪ ಕೇಳಿಬಂದಿದೆ.

ಕೊಪ್ಪಳ ಭಾಗದಲ್ಲಿ ಕೆಲ ಕಾರ್ಖಾನೆಗಳು ತುಂಗಭದ್ರಾ ಜಲಾಶಯದ ನೀರನ್ನು ಕಳ್ಳತನ ಮಾಡುತ್ತಿವೆ ಎಂಬ ಗಂಭೀರ ಆರೋಪವನ್ನು ರೈತರು ಮಾಡಿದ್ದರು. ಈ ಆರೋಪದ ಬೆನ್ನು ಹತ್ತಿದ ದಿಗ್ವಿಜಯ ನ್ಯೂಸ್, ಮುನಿರಾಬಾದ್ ಸಮೀಪದ ತುಂಗಭದ್ರಾ ಜಲಾಶಯ ಭಾಗದಲ್ಲಿ ರಿಯಾಲಿಟಿ ಚೆಕ್ ನಡೆಸಿತ್ತು. ಈ ವೇಳೆ ರೈತರ ಆರೋಪಕ್ಕೆ ಪುಷ್ಠಿ ಸಿಕ್ಕಿದೆ.

ಕೊಪ್ಪಳದ ಹಲವು ಕಾರ್ಖಾನೆಗಳು ಮೋಟರ್ ಪಂಪ್​ಗಳನ್ನು ಹಾಕಿ ಹಗಲು-ರಾತ್ರಿ ನೀರು ಕದಿಯುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇದಕ್ಕೆ ಅಧಿಕಾರಿಗಳು ನೇರವಾಗಿಯೇ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಜಲಾಶಯದ ನೀರಿನ ಪ್ರಮಾಣ 36 ಟಿಎಂಸಿಗೆ ಕುಸಿದಿದ್ದು, 2ನೇ ಬೆಳೆಗೆ ನೀರು ಬಿಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆಗಳಿಗೆ ಮಾತ್ರ ನೀರು ಹೋಗುತ್ತಿದೆ. ಇದರ ಹಿಂದೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಕೈವಾಡವಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​​)