ಅಭಿವೃದ್ಧಿಯೋ ಅಂದಗೆಡಿಸುವ ಕೆಲಸವೋ ?

Koppal Taluku stadium college compound work dispute
  • ಕಾಲೇಜು-ಕ್ರೀಡಾಂಗಣ ನಡುವೆ ತಡೆಗೋಡೆ
  • ವಿದ್ಯಾರ್ಥಿಗಳು-ಕ್ರೀಡಾಪಟುಗಳಿಗೆ ಬೇಕು ಶಾಶ್ವತ ಪರಿಹಾರ

ವಿಜಯವಾಣಿ ವಿಶೇಷ ಕೊಪ್ಪಳ

ನಗರದ ತಾಲೂಕು ಕ್ರೀಡಾಂಗಣವನ್ನು ಅಭಿವೃದ್ಧಿ ನೆಪದಲ್ಲಿ ಅಂದಗೆಡಿಸುವ ಕೆಲಸಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಿದ್ದಾರೆ. ಈಗಿರುವ ಜಾಗದಲ್ಲಿ ಶಾಲಾ&ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಅವಕಾಶ ಮಾಡಿಕೊಡುವ ಬದಲು ಮಧ್ಯದಲ್ಲಿ ಕಾಂಪೌಂಡ್​ ನಿರ್ಮಿಸುವ ಕೆಲಸ ನಡೆದಿದೆ. ಇದರಿಂದ ಗಡಿ ವಿಷಯವಾಗಿ ಕಾಲೇಜು ಹಾಗೂ ಕ್ರೀಡಾ ಇಲಾಖೆ ನಡುವೆ ಗೊಂದಲಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ.

ನಗರದ ಹೃದಯ ಭಾಗದಲ್ಲಿ ತಾಲೂಕು ಕ್ರೀಡಾಂಗಣವಿದೆ. ಇದರ ಸುತ್ತಲೂ ಶಾಲೆ, ಪಿಯು, ಪದವಿ ಕಾಲೇಜುಗಳಿವೆ. ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರಮುಖ ರಾಜಕೀಯ ಸಭೆ, ಸಮಾರಂಭಗಳು, ಕ್ರಿಕೆಟ್​ ಟೂರ್ನಾಮೆಂಟ್​ಗಳು ಹಾಗೂ ವಿವಿಧ ಇಲಾಖೆ ಕ್ರೀಡಾಕೂಟಗಳು ಇಲ್ಲಿಯೇ ನಡೆಯುತ್ತವೆ. 5 ಎಕರೆಯಲ್ಲಿ ಮೈದಾನವಿದೆ. ಸುತ್ತಲೂ ಪ್ರೇಕ್ಷಕರ ಗ್ಯಾಲರಿ, ಮಧ್ಯದಲ್ಲಿ ಬಯಲು ರಂಗ ಮಂದಿರವಿದೆ. ರಸ್ತೆ ಭಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಪದವಿ ಕಾಲೇಜಿಗೆ ಹೊಂದಿಕೊಂಡು ಜಿಮ್​ ಸಹ ನಿರ್ಮಿಸಲಾಗುತ್ತಿದೆ.

ಇದೇ ಮೈದಾನದಲ್ಲಿ ಈ ಹಿಂದೆ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ 1.8 ಎಕರೆ ಭೂಮಿ ನೀಡಿದ್ದು, ಕಟ್ಟಡ ನಿರ್ಮಿಸಲಾಗಿದೆ. ಹಿಂಭಾಗದಲ್ಲಿ ಲ್ಯಾಬ್​ ಸೇರಿ ಇತರ ಕಟ್ಟಡಗಳ ನಿರ್ಮಾಣ ನಡೆಯುತ್ತಿದೆ. ಮುಖ್ಯ ರಸ್ತೆ ಭಾಗದಲ್ಲಿ ಈಗಾಗಲೇ ವಾಣಿಜ್ಯ ಮಳಿಗೆಗಳಿವೆ. ಬಲ ಭಾಗದಲ್ಲಿ ಶಾಲಾ&ಕಾಲೇಜು ಕಾಂಪೌಂಡ್​ ಇದೆ. ಎಡ ಭಾಗದಲ್ಲೂ ಪದವಿ ಕಾಲೇಜು ಕಟ್ಟಡವಿದ್ದು, ಮುಖ್ಯ ಹಾಗೂ ಉಪ ಗೇಟ್​ಗಳ ಮೂಲಕವೇ ಕ್ರೀಡಾಂಗಣ ಪ್ರವೇಶಿಸಿಬೇಕು. ಹೀಗಿದ್ದರೂ ಕಾಲೇಜು ಹಾಗೂ ಬಾಕಿ ಕ್ರೀಡಾಂಗಣ ನಡುವೆ 50 ಲಕ್ಷ ರೂ. ಮೊತ್ತದಲ್ಲಿ ಕಾಂಪೌಂಡ್​ ನಿರ್ಮಿಸುವ ಕೆಲಸ ನಡೆದಿದೆ.

ಕ್ರೀಡೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವುದಾಗಿ ಶಾಸಕ ರಾವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸುವಾಗ ಹೇಳಿದ್ದಾರೆ. ವಾಸ್ತವವಾಗಿ ವಿದ್ಯಾರ್ಥಿಗಳು ಒಳಾಂಗಣ ಕ್ರೀಡಾಂಗಣಗಳಾದ ವಾಲಿಬಾಲ್​, ಕಬಡ್ಡಿ, ಖೋಖೋ ಕೋಟ್​ಗಳನ್ನು ನಿರ್ಮಿಸಲು ಬೇಡಿಕೆ ಇಡುತ್ತಿದ್ದಾರೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಇದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಬದಲಿಗೆ ಕ್ರೀಡಾಂಗಣ&ಕಾಲೇಜುಗಳ ಮಧ್ಯೆ ಗೋಡೆ ಕಟ್ಟುತ್ತಿದ್ದಾರೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಕ್ರೀಡಾಂಗಣಕ್ಕೆ ಸುತ್ತಿಟ್ಟುಕೊಂಡು ಬರಬೇಕು.

ಮತ್ತೊಂದೆಡೆ ಕ್ರಿಕೆಟ್​ ಟೂರ್ನಾಮೆಂಟ್​ಗಳನ್ನು ಏರ್ಪಡಿಸಲು ಜಾಗದ ಕೊರತೆ ಆಗಲಿದೆ. ಬಾಲ್​ ಕಾಲೇಜು ಭಾಗದಲ್ಲಿ ಬಿದ್ದರೆ ಕ್ರೀಡಾಪಟುಗಳು ಸುತ್ತಿಟ್ಟುಕೊಂಡು ಬಂದು ಕೊಂಡೊಯ್ಯಬೇಕಾಗುತ್ತದೆ. ಈ ಬಗ್ಗೆ ಗಮನಕ್ಕಿದ್ದರೂ ಜನಪ್ರತಿನಿಧಿಗಳು ಮೌನವಹಿಸಿದ್ದಾರೆ. ಕ್ರಿಡಾಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಆಟಗಳಿಗೆ ಸೌಲಭ್ಯ ಕಲ್ಪಿಸುವ ಬದಲು ಯಾರದೋ ಒತ್ತಡಕ್ಕೆ ಕಾಂಪೌಂಡ್​ ನಿರ್ಮಾಣಕ್ಕೆ ಕೈಹಾಕಿದ್ದಾರೆಂಬ ಆರೋಪ ಕೇಳಿಬರುತ್ತಿವೆ.

ಗೊಂದಲಕ್ಕೆ ವೇದಿಕೆ
ಸದ್ಯ ಕಾಂಪೌಂಡ್​ ನಿರ್ಮಾಣ ಕಾರ್ಯ ನಡೆದಿದೆ. ಗಡಿ ವಿಷಯವಾಗಿ ಕಾಲೇಜು&ಕ್ರೀಡಾ ಇಲಾಖೆ ನಡುವೆ ಗೊಂದಲ ಏರ್ಪಟ್ಟಿದೆ. ಭಾನುವಾರ ತಡೆಗೋಡೆ ನಿರ್ಮಿಸಲು ಗುಂಡಿ ತೊಡಲಾಗಿದೆ. ಮಹಿಳಾ ಪದವಿ ಕಾಲೇಜಿಗೆ ಹೊಂದಿಕೊಂಡು ತೆಗೆಯಲಾಗಿದೆ. ಆದರೆ, ಕ್ರೀಡಾ ಇಲಾಖೆ ತನ್ನ ಗಡಿಗಿಂತ 15&20 ಅಡಿ ಕಾಲೇಜು ಜಾಗ ಅತಿಕ್ರಮಿಸಿ ನಿರ್ಮಿಸುತ್ತಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಆರೋಪಿಸಿದ್ದಾರೆ. ಕ್ರೀಡಾ ಅಧಿಕಾರಿಗಳ ಗಮನಕ್ಕೆ ಇಲ್ಲದೇ ಗುಂಡಿ ತೆಗೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಕ್ರೀಡಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಟವಾಡಲು ಅವಕಾಶ ನೀಡುವುದಿಲ್ಲವೆಂಬುದು ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳ ಅಳಲು.

ತಟಸ್ಥವಾದ ಜನಪ್ರತಿನಿಧಿ,ಅಧಿಕಾರಿಗಳು
ಇನ್ನು ಕ್ರೀಡಾಂಗಣ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಜನಪ್ರತಿನಿಧಿಗಳು ಮೀನ&ಮೇಷ ಎಣಿಸುತ್ತಿದ್ದಾರೆ. ಮೈದಾನ ಸುತ್ತಲೂ ಶಾಲಾ&ಕಾಲೇಜುಗಳಿದ್ದು, ವಿದ್ಯಾರ್ಥಿಗಳು ತಮ್ಮ ಕ್ರೀಡಾಕೂಟಕ್ಕೆ ಅವಕಾಶ ನೀಡಬೇಕು. ಇತರ ಕ್ರೀಡಾಕೂಟಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಅವಕಾಶ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ. ಅವ್ಯವಸ್ಥೆ ಆಗರವಾಗಿದ್ದ ಕ್ರೀಡಾಂಗಣ ಉಳಿಸಿಕೊಳ್ಳಲು ಹೋರಾಟ ಮಾಡಿದ್ದು, ಇಲ್ಲಿಯೇ ಕ್ರೀಡಾಕೂಟಕ್ಕೆ ಅವಕಾಶ ನೀಡಬೇಂಬುದು ಕ್ರೀಡಾಪಟುಗಳ ವಾದ. ಶಾಶ್ವತ ಪರಿಹಾರಕ್ಕೆ ಶಾಸಕ ರಾವೇಂದ್ರ ಹಿಟ್ನಾಳ ಹಾಗೂ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಕ್ರೀಡಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

50 ಲಕ್ಷ ರೂ. ಅನುದಾನದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ತಡೆಗೋಡೆ ನಿರ್ಮಾಣ ನಡೆದಿದೆ. ಕಾಲೇಜು ಜಾಗದಲ್ಲಿ ಗುಂಡಿ ತೆಗೆದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ನನ್ನನ್ನು ಕೇಳಿಲ್ಲ. ಸರ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವೆ. ಸರ್ವೇ ಬಳಿಕ ಗಡಿ ನಿಗದಿ ಆಗಲಿದೆ. ಅಲ್ಲಿವರೆಗೂ ಕೆಲಸ ನಡೆಸದಂತೆ ಸೂಚಿಸುವೆ.

ವಿಠ್ಠಲ ಜಾಬಗೌಡರ. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೊಪ್ಪಳ.

ಕಾಲೇಜು ಉಳಿಸಿಕೊಳ್ಳಲು ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಸದ್ಯ ಕಾಲೇಜು ಜಾಗದಲ್ಲಿ ಕಾಂಪೌಂಡ್​ ನಿರ್ಮಿಸುತ್ತಿದ್ದಾರೆ. ಇದು ಸರಿಯಲ್ಲ. ಈ ಬಗ್ಗೆ ಶಾಸಕರನ್ನು ಸಂಪರ್ಕಿಸಿ ತಿಳಿಸಲಾಗುವುದು. ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ. ಕ್ರೀಡಾಂಗಣದಲ್ಲಿ ಎಲ್ಲರಿಗೂ ಅವಕಾಶ ಸಿಗಬೇಕು.

ಅಲ್ಲಮಪ್ರಭು ಬೆಟ್ಟದೂರು. ಮಹಿಳಾ ಪದವಿ ಕಾಲೇಜು ಸಿಡಿಸಿ ಸದಸ್ಯ.

Share This Article

ತೂಕ ಇಳಿಕೆಗೆ ನಂಬರ್​ 1 ಹಣ್ಣು! ಇದನ್ನು ತಿಂದರೆ ಸಾಕು ಬೆಣ್ಣೆಯಂತೆ ಕರಗಿ ಹೋಗುತ್ತದೆ ಬೊಜ್ಜು

ಎಷ್ಟೇ ಪ್ರಯತ್ನಪಟ್ಟರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಬೊಜ್ಜು ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಒಂದು ಹಣ್ಣನ್ನು ತಿಂದರೆ…

ನಿಮ್ಮ ಅಂಗೈನಲ್ಲಿ ಈ ರೀತಿ ತ್ರಿಕೋನ ಚಿಹ್ನೆ ಇದೆಯಾ? ಇದ್ರೆ ಏನಾಗುತ್ತೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…