ಕೊಪ್ಪಳ: ದೇಶದ ಆರ್ಥಿಕತೆ, ಶಿಕ್ಷಣ, ಕೃಷಿ ರಂಗ ಅಭಿವೃದ್ಧಿಯಲ್ಲಿ ಸನ್ಯಾಸಿಗಳು, ಸ್ವಾಮೀಜಿಗಳ ಪಾತ್ರ ಮಹತ್ವದ್ದಿದೆ. ಆದರೆ, ಸ್ವಾಮೀಜಿಗಳನ್ನು ಸರಿಯಾಗಿ ಅರ್ಥೈಸುವ ಕೆಲಸ ಆಗುತ್ತಿಲ್ಲವೆಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಮಂಗಳವಾರ ತಡರಾತ್ರಿ ನಡೆದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಸನ್ಯಾಸಿ, ಸ್ವಾಮೀಜಿಗಳು ಬಹುದೊಡ್ಡ ಪಾತ್ರವಹಿಸುತ್ತಿದ್ದಾರೆ. ದೇಶ, ವಿದೇಶಗಳಿಗೆ ತೆರಳಿ ಭಾರತರ ಸಂಸ್ಕೃತಿ, ಧರ್ಮ, ಸಂಪ್ರದಾಯ ಪರಿಚಯಿಸುತ್ತಿದ್ದಾರೆ. ಈಹಿಂದೆ ನಮ್ಮ ದೇಶದಿಂದ ಕೊಳ್ಳೆ ಹೊಡೆದುಕೊಂಡು ಹೊತ್ತೊಯ್ದಿದ್ದ ಸಂಪತ್ತನ್ನು ದೇಣಿಗೆ ರೂಪದಲ್ಲಿ ಮರಳಿ ತರುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಕೆಲ ಮಠಗಳು ಎತ್ತರಕ್ಕೆ ಏರುತ್ತಿವೆ. ಇನ್ನು ಕೆಲವು ಅಧೋಗತಿ ಹಾದಿ ಹಿಡಿದಿವೆ. ಅಜ್ಞಾನಿ ಸ್ವಾಮಿ, ಸ್ವಾರ್ಥಿ ಭಕ್ತ ಇದ್ದರೆ ಆ ಮಠ ಉದ್ಧಾರವಾಗುವುದಿಲ್ಲ. ಜ್ಞಾನಿ ಸ್ವಾಮಿ, ನಿಸ್ವಾರ್ಥಿ ಭಕ್ತನಿದ್ದರೆ ಉತ್ತರೋತ್ತರವಾಗಿ ಬೆಳೆಯುತ್ತದೆ. ಅಂಥಹ ಮಠಗಳಲ್ಲಿ ಗವಿಮಠ ಒಂದು. ಗವಿಶ್ರೀಗಳು ಇತರರಿಗಿಂತ ಭಿನ್ನರು. ದೇಶದ ಇತಿಹಾಸ, ಕಾನೂನಿನಲ್ಲಿ 18 ಸಂಖ್ಯೆಗೆ ಮಹತ್ವದ ಸ್ಥಾನವಿದೆ. ಇವರು ಗವಿಮಠಕ್ಕೆ 18ನೇ ಪೀಠಾಧಿಪತಿಗಳು. ಇನ್ನಷ್ಟು ಮಹತ್ತರ ಕಾರ್ಯಗಳು ಅವರಿಂದ ಆಗಲಿವೆ ಎಂದರು.
ಮಠಗಳು ಹುಟ್ಟು ಹುಡುಕುವುದು ಕಷ್ಟ. ಗವಿಮಠ, ಶಿರಹಟ್ಟಿ ಮಠ ಯಾವಾಗ ಹುಟ್ಟಿವೆ ಎಂಬುದನ್ನು ಹೇಳಬಹುದು. ಆದರೆ, ಒಟ್ಟಾರೆ ಮಠದ ಮೂಲ ಹುಡುಕುವುದು ಅಸಾಧ್ಯ. ವೇದ, ಪುರಾಣ, ರಾಮಾಯಣದಲ್ಲೂ ಮಠದ ಉಲ್ಲೇಖವಿದೆ. ಸ್ವಾಮಿ, ಸನ್ಯಾಸಿಗಳು, ದಿಗಂಬರ, ಶ್ವೇತಂಬರ ಹೀಗೆ ದೇಶದಲ್ಲಿ 50ಲಕ್ಷ ಸ್ವಾಮೀಜಿಗಳಿದ್ದಾರೆ. ಅವರ ಪೈಕಿ ಬೆರಳೆಣಿಕೆಯಲ್ಲಿ ಸಿಗುವ ಸ್ವಾಮಿಗಳಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಒಬ್ಬರು. ನಮ್ಮದು ಕಾವಿಧಾರಿಗಳ ದೇಶ. ಛತ್ರಪತಿ ಶಿವಾಜಿ ಮನೆಗೆ ಒಮ್ಮೆ ಅವರ ಗುರು ಭಿಕ್ಷಾಂದೇಹಿ ಎಂದು ಬಂದರು. ಶಿವಾಜಿ ತನ್ನ ಆಧೀನದ ಎಲ್ಲ ಗಡಾಗಳನ್ನ ತಾಮ್ರ ಪತ್ರದಲ್ಲಿ ಬರೆದು ನೀಡಿದರು. ಅದನ್ನು ಗುರುಗಳು ಆಶೀರ್ವದಿಸಿ ಮರಳಿಸಿದರು. ಆಗ ಆತ ಎಲ್ಲ ಕೋಟೆಗಳ ಮೇಲೆ ಕಾವಿ ಝಂಡಾ ಹಾರಿಸಲು ಸೂಚಿಸಿದ. ಇದು ಕಾವಿಗೆ ಇರುವ ಶಕ್ತಿ. ಹಿಂದೆ, ಈಗ ಮುಂದೆಯೂ ದೇಶದಲ್ಲಿ ಕಾವಿಧಾರಿಗಳಿರಬೇಕು ಎಂದು ಪ್ರತಿಪಾದಿಸಿದರು.
ನಕ್ಕು ನಲಿಸಿದ ಪ್ರಾಣೇಶ್: ಪ್ರತಿ ವರ್ಷದಂತೆ ಈ ಬಾರಿಯೂ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಗವಿಮಠದ ಭಕ್ತರನ್ನು ತಮ್ಮ ಹಾಸ್ಯದ ಮೂಲಕ ನಗೆ ಗಡಲ್ಲಿ ತೇಲುವಂತೆ ಮಾಡಿದರು. ಗಂಡ-ಹೆಂಡತಿ, ಹುಟ್ಟು-ಸಾವು, ಗ್ರಾಮೀಣ ಭಾಗದ ಹಾಸ್ಯವನ್ನು ಹೇಳಿ ಎಲ್ಲರನ್ನು ನಗಿಸಿದರು. ಎಂದಿನ ತಮ್ಮ ಶೈಲಿಯಲ್ಲಿ ಹಾಸ್ಯದೊಂದಿಗೆ ಕನ್ನಡ ಭಾಷೆ, ಕುಟುಂಬದ ಮಹತ್ವ ತಿಳಿಸಿ ರಂಜಿಸಿದರು.