ಮಾನ್‌ಧನ್ ಯೋಜನೆಯಲ್ಲಿ 664 ಜನ ನೋಂದಣಿ

ಕೊಪ್ಪಳ: ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆಯನ್ವಯ ಜಿಲ್ಲೆಯಲ್ಲಿ 664 ಜನ ನೋಂದಣಿಯಾಗಿದ್ದು, ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಹೇಳಿದರು.

ನಗರದ ನಿರ್ಮಿತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ ಸೇರಿ ಇತರ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆಯ ಚಾಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಅರ್ಹ ಲಾನುಭವಿಗಳು ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆಯ ಲಾಭ ಪಡೆದುಕೊಳ್ಳಬೇಕು. ರಾಜ್ಯದಲ್ಲಿ ಒಟ್ಟು 10,300 ಜನ ನೋಂದಾಯಿಸಿಕೊಂಡಿದ್ದಾರೆ. ಇನ್ನು ಹೆಚ್ಚಿನ ಜನ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದರು. ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು.

ಜಿಪಂ ಸಿಇಒ ಆರ್.ಎಸ್. ಪೆದ್ದಪ್ಪಯ್ಯ, ಬಳ್ಳಾರಿ ಭವಿಷ್ಯ ನಿಧಿ ಇಲಾಖೆಯ ಘೋಷ್ ಸಹಾಯಕ ಆಯುಕ್ತ ತಪಸ್ ಕುಮಾರ್, ಇ.ಎಸ್.ಐ. ಇಲಾಖೆ ರಾಜು ದೇವಾಡಿಗ, ಜಿಲ್ಲಾ ಕಾರ್ಮಿಕ ನಿರೀಕ್ಷಕ ಹೊನ್ನಪ್ಪ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಶಿಧರ್ ಮತ್ತಿತರರಿದ್ದರು.