ಗ್ರಾಪಂ ಆಸ್ತಿ ಖಾಸಗಿ ವ್ಯಕ್ತಿಗೆ ಬಾಡಿಗೆ ನೀಡಿದ ಕಾತರಕಿ ಪಿಡಿಒ ಅಮಾನತು

ಕೊಪ್ಪಳ: ಗ್ರಾಪಂಗೆ ಸಂಬಂಧಿಸಿದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಬಾಡಿಗೆ ನೀಡುವ ಮೂಲಕ ಕರ್ತವ್ಯಲೋಪ ಎಸಗಿದ ಪಿಡಿಒ ಶ್ರೀನಿವಾಸ್ ಪತ್ತಾರ್‌ರನ್ನು ಅಮಾನತು ಮಾಡಿ ಜಿಪಂ ಸಿಇಒ ವೆಂಕಟರಾಜಾ ಆದೇಶಿಸಿದ್ದಾರೆ.

ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರಿನ ವಿಎಸ್‌ಎಸ್‌ಎನ್ ಗೋದಾಮನ್ನು 2011-12ರಲ್ಲಿ ಖಾಸಗಿ ವ್ಯಕ್ತಿಗೆ ಮಾಸಿಕ ಬಾಡಿಗೆ 400 ರೂ.ನಂತೆ 10 ವರ್ಷಕ್ಕೆ ಬಾಡಿಗೆ ನೀಡಲಾಗಿದೆ. ಕೇವಲ ಗ್ರಾಪಂ ಠರಾವಿನ ಆಧಾರದಲ್ಲಿ ಪಿಡಿಒ ಈ ಕಾರ್ಯ ಮಾಡಿದ್ದು, ತಾಪಂ ಇಒ ಗಮನಕ್ಕೂ ತಂದಿಲ್ಲ. ಆದರೆ ಗ್ರಾಮೀಣ ಗೋದಾಮುಗಳನ್ನು ಆಯಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಗಳಿಗೆ ಹಸ್ತಾಂತರಿಸಲು 2012ರಲ್ಲೇ ಸ್ಪಷ್ಟ ನಿರ್ದೇಶನವಿದೆ. ಅಲ್ಲದೆ ಗ್ರಾಪಂಗಳಿಗೆ ನೀಡಿದ ಗೋದಾಮು ವಾಪಸ್ ಪಡೆದು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ ಹಸ್ತಾಂತರಿಸಲು ಸೂಚಿಸಲಾಗಿದೆ.

ಬಾಡಿಗೆ ನೀಡಿದ್ದ ಗೋದಾಮು ವಾಪಸ್ ಪಡೆದು ಸಹಕಾರ ಸಂಘಗಳಿಗೆ ನೀಡಲು ಸೂಚಿಸಿದರೂ ಕ್ರಮ ಕೈಗೊಳ್ಳದೆ ಪರಸನಗೌಡ ವಿರೂಪಾಕ್ಷಗೌಡ ಹಿರೇಗೌಡರ ಮಾಲೀಕತ್ವದ ಶ್ರೀ ಜಗದ್ಗುರು ಸಿದ್ಧಾರೂಢ ಅಗ್ರೋ ಎಜೆನ್ಸಿ ಕೊಪ್ಪಳ ಇವರಿಗೆ ಬಾಡಿಗೆ ನೀಡಿರುವುದು ತನಿಖೆಯಿಂದ ದೃಢಪಟ್ಟಿದ್ದು, ಕರ್ತವ್ಯಲೋಪವಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಿಡಿಒ ಶ್ರೀನಿವಾಸ್ ಪತ್ತಾರರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

 

Leave a Reply

Your email address will not be published. Required fields are marked *