ಮದ್ಯ ವ್ಯಸನಮುಕ್ತರಾದ 20 ಪೊಲೀಸರು!

ಚಿಕ್ಕಮಗಳೂರು: ಈಗ ನನಗೆ ಪುನರ್ಜನ್ಮ ಸಿಕ್ಕಿದೆ. ಆ ದೇವರೇ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ರೂಪದಲ್ಲಿ ಭುವಿಗಿಳಿದು ನನ್ನನ್ನು ಕಾಪಾಡಿದ್ದಾನೆ. ಪ್ರಪಂಚವೀಗ ನನಗೆ ಶುಭ್ರವಾಗಿ ಕಾಣುತ್ತಿದೆ. ಪುನರ್ಜನ್ಮದ ಅವಕಾಶ ಕೊಟ್ಟ ಸಂಸ್ಥೆಗೆ ಚಿರರುಣಿ. ಮದ್ಯದ ಅಮಲಿನಿಂದ ಕುಟುಂಬ, ಸ್ನೇಹಿತರಿಂದ ದೂರವಾಗಿದ್ದ ನನಗೆ ಈಗ ಮನುಷ್ಯತ್ವದ ಬೆಳಕು ಕಾಣಿಸತೊಡಗಿದೆ…

ಮದ್ಯ ವ್ಯಸನ ಮುಕ್ತನಾಗಿ ಮನದಾಳದ ಅನುಭವವನ್ನು ‘ವಿಜಯವಾಣಿ’ಯೊಂದಿಗೆ ಹೀಗೆ ಹಂಚಿಕೊಂಡವರು ಕೊಪ್ಪಳದ ಐಆರ್​ಬಿ (ಇಂಡಿಯನ್ ರಿಜರ್ವ್ ಬೆಟಾಲಿಯನ್) ಪೊಲೀಸ್ ಭೀಮನಗೌಡ.

ನಗರ ಹೊರವಲಯದ ಹಿರೇಮಗಳೂರಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಎಂಟು ದಿನ ಆಯೋಜಿಸಿರುವ 1,238ನೇ ಮದ್ಯವರ್ಜನ ಶಿಬಿರದಲ್ಲಿ ಒಟ್ಟೂ 112 ಶಿಬಿರಾರ್ಥಿಗಳಿದ್ದರು. ಅದರಲ್ಲಿ ಐಆರ್​ಬಿಯ 19, ಚಿಕ್ಕಮಗಳೂರಿನ ಒಬ್ಬ ಸಿವಿಲ್ ಪೊಲೀಸ್ ಭಾಗವಹಿಸಿ ವ್ಯಸನಮುಕ್ತರಾಗಿ ನವಜೀವನ ಆರಂಭಿಸಿದ್ದಾರೆ.

ಔಷಧಗಳಿಲ್ಲದೆ ಕೇವಲ ಮನರಂಜನಾ ಕಾರ್ಯಕ್ರಮ, ಉಪನ್ಯಾಸಗಳ ಮೂಲಕ ವ್ಯಸನಮುಕ್ತರನ್ನಾಗಿ ಮಾಡುವ ಶಿಬಿರವಿದು. ಗಾರೆ ಕೆಲಸ, ಗ್ಯಾರೇಜ್ ಕಾರ್ವಿುಕ, ಕೂಲಿ ಕೆಲಸ ಮಾಡುವವರಿಂದ ಹಿಡಿದು ಕೈತುಂಬ ಸಂಬಳ ಪಡೆಯುವ ಸರ್ಕಾರಿ ನೌಕರರೂ ಈ ಶಿಬಿರದಲ್ಲಿ ಭಾಗಿಯಾಗಿ ಪರಿವರ್ತನೆಗೊಂಡಿದ್ದು ವಿಶೇಷ. ಕುಡಿದು ತಮ್ಮ ಜತೆ ಸಂಸಾರದ ಗೌರವ ಬೀದಿಗೆ ತರುತ್ತಿದ್ದ ಇವರು ಹೊಸ ಮನುಷ್ಯರಾಗಿ ಬುಧವಾರ ಶಿಬಿರದಿಂದ ಹೊರಬರುತ್ತಿದ್ದಾರೆ.