ಕೊಪ್ಪಳ: ತುಂಗಭದ್ರಾ ಜಲಾಶಯವನ್ನು ಟಿಬಿ ಬೋರ್ಡ್ ನಿರ್ವಹಣೆ ಮಾಡುತ್ತದೆ. ಕೇಂದ್ರ ಸರ್ಕಾರ ನೇಮಕ ಮಾಡುತ್ತದೆ. ಅದರಲ್ಲಿ ಆಂಧ್ರ, ತೆಲಂಗಾಣ ಹಾಗೂ ನಮ್ಮ ರಾಜ್ಯದ ಅಧಿಕಾರಿಗಳಿರುತ್ತಾರೆ. ಅವರೇ ನೋಡಿಕೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಗಿಣಿಗೇರಾ ಖಾಸಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ರಾಜಕೀಯವಾಗಿ ಚರ್ಚಿಸುತ್ತಿದ್ದಾರೆ. ನಾನು ರಾಜಕೀಯ ಮಾತನಾಡಲ್ಲ. ಗೇಟ್ ತುಂಡಾಗಿ ಹೋಗಿದೆ. ಅದರಲ್ಲಿ ರಾಜ್ಯದ ಪಾತ್ರವೇನಿದೆ. ಸದ್ಯ ಇಂಥವರೇ ತಪ್ಪು ಮಾಡಿದ್ದಾರೆಂದು ಹೇಳಲಾರೆ. ನೀರು ಹೋಗುತ್ತಿದೆ. ಉಳಿಸುವ ಕೆಲಸ ಮಾಡೋಣ. ಇನ್ನು 60 ಟಿಎಂಸಿ ನೀರು ಉಳಿಯುತ್ತದೆ. ಆ.15ರ ನಂತರ ಮಳೆ ಆಗುವ ಸಾಧ್ಯತೆ ಇದೆ. ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಬಗ್ಗೆ ನಂಬಿಕೆ ಇಟ್ಟುಕೊಳ್ಳೋಣ. ರೈತರಿಗೆ ತೊಂದರೆ ಆಗದಂತೆ ಕ್ರಮವಹಿಸುತ್ತೇವೆ ಎಂದರು.
ಡ್ಯಾಂ ಬಹಳ ಹಳೆಯದಾಗಿದೆ. ಎಲ್ಲ ಜಲಾಶಯದ ಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ತಂಡ ರಚಿಸಲಾಗಿದೆ. ಬಿಜೆಪಿಯವರಿಗೆ ಗೂಬೆ ಕೂಡಿಸುವುದೇ ಕೆಲಸವಾಗಿದೆ. ನಾವು ಯಾರ ಮೇಲೂ ಗೂಬೆ ಕೂಡಿಸುವುದಿಲ್ಲ ಎಂದು ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ರೇಗಿದ ಸಿಎಂ: ಗೇಟ್ ಕಟ್ ಆಗಿದ್ದಕ್ಕೆ ಸರ್ಕಾರವೇ ನೇರ ಹೊಣೆ ಎಂಬ ವಿಪಕ್ಷಗಳ ಆರೋಪಕ್ಕೆ ರೇಗಿದ ಸಿಎಂ, ನಾನು ಹೇಳುವುದನ್ನು ಕೇಳಿ. ಇಲ್ಲದಿದ್ದರೆ ನಾನು ವಾಪಸ್ ಹೋಗುತ್ತೇನೆ ನೋಡಿ ಎಂದು ರೇಗಿದರು.