ಕೊಪ್ಪಳ: ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಎಲ್ಲ ಪ್ರಶಿಕ್ಷಣಾರ್ಥಿಗಳು ಆತ್ಮಗೌರವ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರು ತರಬೇಕು ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ತಾಲೂಕಿನ ಮುನಿರಾಬಾದ್ ಕೆಎಸ್‌ಆರ್‌ಪಿ ತರಬೇತಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 23ನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಟಾಚಾರಕ್ಕೆ ಕೆಲಸಕ್ಕೆ ಬರಬೇಡಿ. ಉತ್ತಮ ಶ್ರೇಣಿ ಹಾಗೂ ಅಂಕ ಗಳಿಸುವುದು ಕೂಡ ಮುಖ್ಯವಲ್ಲ. ವೃತ್ತಿಯಲ್ಲಿ ನೀವು ಸಲ್ಲಿಸುವ ಸೇವೆಯಿಂದ ಹೆಸರು ಬರುತ್ತದೆ. ದುಶ್ಚಟಗಳಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು. ಇಲಾಖೆ ಹಾಗೂ ವೈಯಕ್ತಿಕವಾಗಿ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉತ್ತರ ಕರ್ನಾಟಕದಲ್ಲಿ ಮಹಿಳೆಯರಿಗೆ ಆತ್ಮರಕ್ಷಣೆ ತರಬೇತಿ ನೀಡಬೇಕು. ಅವರನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿಸಬೇಕು. ಬೆಂಗಳೂರಿನಲ್ಲಿ ಈಗಾಗಲೇ ತರಬೇತಿ ಆರಂಭವಾಗಿದೆ. ಇಲ್ಲಿಯ ಶಾಲಾ-ಕಾಲೇಜಿನಲ್ಲಿ ತರಬೇತಿ ನೀಡಬೇಕಿದೆ. ಕಲಿಕೆ ಎಂಬುದು ನಿರಂತರ. ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ನಿಮಗಿದೆ. ನಿಮ್ಮ ಆಸಕ್ತಿ ಇರುವ ವಿಭಾಗದಲ್ಲಿ ಕೆಲಸ ಮಾಡಿ ಎಂದು ಅಲೋಕ್ ಕುಮಾರ್ ತಿಳಿಸಿದರು.