ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯಕ್ಕೆ ಸೋಮವಾರ ಮಾಜಿ ಸಿಎಂ,ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಲಿದ್ದಾರೆ.
ಜಲಾಶಯದ 19ನೇ ಗೇಟ್ ಕಳಚಿದ್ದು, ಅಪಾರ ನೀರು ಹೊರ ಹೋಗುತ್ತಿದೆ. ಭಾನುವಾರ ಸ್ಥಳಿಯ ವಿಪಕ್ಷ ನಾಯಕರು ಭೇಟಿ ನೀಡಿ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಸಹ ಸಂಜೆ ಆಗಮಿಸಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.
ಸೋಮವಾರ ಮಾಜಿ ಸಿಎಂ,ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಮಧ್ಯಾಹ್ಮ 12.30ಕ್ಕೆ ಆಗಮಿಸಲಿದ್ದು, ಗೇಟ್ ವೀಕ್ಷಣೆ ಮಾಡುವರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸುವರು.
ನಂತರ ವಿಜಯೇಂದ್ರ, ಅನುಮಾನಾಸ್ಪದವಾಗಿ ಮೃತಪಟ್ಟ ಯಾದಗಿರಿ ಪಿಎಸ್ಐ ಪರಶುರಾಮ ಅವರ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳುವರು.
ಸಿಬಿಐ ತನಿಖೆ ಆಗಲಿ: ತುಂಗಭದ್ರಾ ಜಲಾಶಯವನ್ನು ನಿರ್ವಹಣೆ ಮಾಡುವವರು ಯಾರು? ಈ ಕೆಲಸ ಮಾಡುವ ಗುತ್ತಿಗೆದಾರನಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬ ಮಾಹಿತಿ ಸರ್ಕಾರ ಬಹಿರಂಗ ಮಾಡಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದರು.
ತಾಲೂಕಿನ ಮುನಿರಾಬಾದ್‌ನಲ್ಲಿರುವ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾರ ಬೇಜವಾಬ್ದಾರಿಯಿಂದ ಗೇಟ್ ಕೊಚ್ಚಿಕೊಂಡು ಹೋಗಿದೆ. ಈ ಕುರಿತು ಸಿಬಿಐ ತನಿಖೆ ನಡೆಯಬೇಕು. ಜಲಾಶಯದ ವಾರ್ಷಿಕ ನಿರ್ವಹಣೆ ಗುತ್ತಿಗೆದಾರರು ಯಾರು? ಅವರಿಗೆ ಪಾವತಿಯಾದ ಹಣ ಎಷ್ಟು ಎನ್ನುವುದು ಗೊತ್ತಾಗಬೇಕು. ಜಲಾಶಯದ ನೀರು ಹೊರಬಿಡುತ್ತಿರುವ ಕಾರಣ ನಮ್ಮ ಭಾಗದ ರೈತರಿಗೆ ದೊಡ್ಡ ಅನ್ಯಾಯವಾಗುತ್ತದೆ. ಸರ್ಕಾರವೇ ಸಂಪೂರ್ಣ ಜವಾಬ್ದಾರಿ ಹೊರಬೇಕು ಎಂದು ಒತ್ತಾಯಿಸಿದರು.