ಮೋದಿ ಕೊಟ್ಟ ಭರವಸೆ ಈಡೇರಿಲ್ಲ -ಸಚಿವ ನಾಡಗೌಡ ಆರೋಪ

ಕೊಪ್ಪಳ: ಬಡವರ ಖಾತೆಗೆ 15 ಲಕ್ಷ ರೂ., ಯುವಕರಿಗೆ ಉದ್ಯೋಗ ಸೃಷ್ಟಿ , ಸ್ವಾಮಿನಾಥನ್ ವರದಿ ಜಾರಿ ಮೊದಲಾದ ಭರವಸೆಗಳನ್ನು ಕಳೆದ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋಡಿ ನೀಡಿದ್ದು, ಇನ್ನೂ ಈಡೇರಿಲ್ಲ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಟರಾವ್ ನಾಡಗೌಡ ಆರೋಪಿಸಿದರು.

ನಗರದ ಶಿವ ಚಿತ್ರಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಭರವಸೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಅವರು, ಒಂದು ಜಾತಿ, ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು 46 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದೇವೆ. ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂಬುದು ಕೇವಲ ಬಾಯಲ್ಲಿ ಇದೆ. ಬಡವರು, ರೈತರು ವಿಕಾಸವಾಗಿಲ್ಲ. ಬದಲಿಗೆ ಅಂಬಾನಿ, ಅದಾನಿ, ನೀರವ್ ಮೋದಿ, ಮಲ್ಯ ಮೊದಲಾದವರ ವಿಕಾಸವಾಗಿದೆ. ಸಿಎಸ್‌ಆರ್ ನಿಧಿ, ನರೇಗಾ ಹಣ ಸೇರಿ ರಾಜ್ಯಕ್ಕೆ ಬರಬೇಕಾದ ಅನುದಾನ ಸರಿಯಾಗಿ ನೀಡುತ್ತಿಲ್ಲ. ಅವರ ಆಡಳಿತ ಉದ್ಯಮಿಗಳ ಪರವಿದೆ ಎಂದು ಆರೋಪಿಸಿದರು.

ನೋಟ್‌ಬ್ಯಾನ್, ಜಿಎಸ್‌ಟಿ ಜಾರಿ ಸೇರಿ ಇತರ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ. ಈವರಗೆ ಭಾರತ-ಪಾಕ್ ಯುದ್ಧಗಳಲ್ಲಿ ಭಾರತವೇ ಗೆದ್ದಿದೆ. ಅದನ್ನು ಅಂದಿನ ಸರ್ಕಾರಗಳು ರಾಜಕೀಯವಾಗಿ ಬಳಸಿಕೊಂಡಿಲ್ಲ. ಇವರು ಏರ್‌ಸ್ಟ್ರೈಕ್ ಮಾಡಿದ್ದನ್ನು ಕೊಚ್ಚಿಕೊಳ್ಳುತ್ತಾರೆ. ಸೈನಿಕರು ಮಾಡಿದ್ದನ್ನು ತಾವೇ ಮಾಡಿದಂತೆ ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರದೀಪ್‌ಗೌಡ ಮಾತನಾಡಿ, ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾವು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್‌ರನ್ನು ಬೆಂಬಲಿಸಬೇಕು. ತಳಮಟ್ಟದ ಕಾರ್ಯಕರ್ತರಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳಿರುವುದು ಸಹಜ. ಆದರೂ. ಅವೆಲ್ಲವನ್ನೂ ಬದಿಗಿಡೋಣ. ಕಾಂಗ್ರೆಸ್‌ನವರು ನಮ್ಮನ್ನು ಕರೆಯದ್ದಿರೂ ನಾವೇ ಅವರ ಬಳಿ ಹೋಗೋಣ ಎಂದರು. ಮುಖಂಡರಾದ ಕೆ.ಎಂ.ಸೈಯ್ಯದ್, ರಾಘವೇಂದ್ರ ಗಂಗಾವತಿ, ಪ್ರಸನ್ನ ಗಡಾದ್, ಅಮರೇಗೌಡ ಪಾಟೀಲ್ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಸುರೇಶ್ ಭೂಮರಡ್ಡಿ, ಕಾಟನ್ ಪಾಷಾ, ವಕ್ತಾರ ಮೌನೇಶ ವಡ್ಟಟ್ಟಿ ಇತರರು ಇದ್ದರು.

ಬೆರಳೆಣಿಕೆಯಷ್ಟು ಕಾರ್ಯಕರ್ತರು
ಜೆಡಿಎಸ್-ಕಾಂಗ್ರೆಸ್ ನಡುವೆ ಹೊಂದಾಣಿಕೆ ಇದೆ ಎಂಬುದನ್ನು ಸಾಬೀತು ಮಾಡಲು ಸಭೆ ಕರೆಯಲಾಗಿತ್ತು. ಆದರೆ, ಸಭೆಯಲ್ಲಿ ಬೆರಳೆಣಿಕೆಯಷ್ಟು ಕಾರ್ಯಕರ್ತರು ಆಗಮಿಸಿದ್ದರು. ಕಾಂಗ್ರೆಸ್‌ನ 2-3 ನಾಯಕರು ಬಿಟ್ಟರೆ, ಪ್ರಮುಖ ನಾಯಕರು ವೇದಿಕೆ ಅಥವಾ ಸಭೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಅಲ್ಲದೇ ಜೆಡಿಎಸ್ ನಾಯಕರು ಪ್ರತಿ ಬಾರಿಯೂ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಕಾಂಗ್ರೆಸ್ ಬೆಂಬಲಿಸಿ ಎಂದು ಕಾರ್ಯಕರ್ತರಿಗೆ ಒತ್ತಿ ಒತ್ತಿ ಹೇಳಿದರು. ಅಲ್ಲದೇ ಕಾರ್ಯಕ್ರಮ ತಡವಾಗಿದ್ದರಿಂದ ಕಾರ್ಯಕರ್ತರು ಬರಲಿಲ್ಲವೆಂದು ಜನ ಸೇರಿದಿರುವುದಕ್ಕೆ ಸಮಜಾಯಿಷಿ ನೀಡಿದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸಿಎಂ ಕುಮಾರಸ್ವಾಮಿ ಬಗ್ಗೆ ಹೀನಾಯವಾಗಿ ಮಾತನಾಡುತ್ತಾರೆ. ಆದರೆ, ನಮ್ಮ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಸಿಎಂ ಕುಮಾರಸ್ವಾಮಿ ಸಂಪರ್ಕದಲ್ಲಿದ್ದಾರೆ. ಅವರು ಜೆಡಿಎಸ್‌ಗೆ ಬರಲು ಉತ್ಸುಕರಾಗಿದ್ದಾರೆ. ಬಹುಷಃ ಈ ಬಗ್ಗೆ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ಅವರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ. ಭೂಮಿ ಮೇಲೆ ಯಾರೂ ಶಾಶ್ವತವಲ್ಲ. ಈಶ್ವರಪ್ಪ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು.
| ವೀರೇಶ ಮಹಾಂತಯ್ಯನಮಠ ಜೆಡಿಎಸ್ ಕೊಪ್ಪಳ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ