1.50 ಕೋಟಿ ರೂಪಾಯಿ ವಹಿವಾಟು ಕಂಡ ಕೊಪ್ಪಳ ಮಾವು ಮೇಳಕ್ಕೆ ತೆರೆ: ಪ್ರದರ್ಶನಕ್ಕೆ ಭೇಟಿ ನೀಡಿ, ಪ್ರಶಸ್ತಿ ಪತ್ರ ವಿತರಿಸಿದ ಗವಿಶ್ರೀಗಳು

ಒಟ್ಟು 12 ದಿನ ಪ್ರದರ್ಶನ 160 ಟನ್ ಫಲ ಮಾರಾಟ>>

ಕೊಪ್ಪಳ: 12 ದಿನಗಳಿಂದ ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಭರ್ಜರಿಯಾಗಿ ನಡೆಯುತ್ತ ಬಂದಿದ್ದ ಮಾವು ಮೇಳಕ್ಕೆ ಭಾನುವಾರ ತೆರೆ ಬಿದ್ದಿದ್ದು, ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಮಾರೋಪಗೊಳಿಸಿದರು.

ಮುಕ್ತಾಯ ಸಮಾರಂಭಕ್ಕೂ ಮೊದಲು ಮೇಳದ ವಿವಿಧ ಸ್ಟಾಲ್‌ಗಳಿಗೆ ತೆರಳಿದ ಗವಿಶ್ರೀ, ಮಾವು ಪ್ರದರ್ಶನ ಮತ್ತು ಮಾರಾಟ ವೀಕ್ಷಿಸಿದರು. ಮೇಳದಲ್ಲಿ ಪಾಲ್ಗೊಂಡ ಮಾವು ಮಾರಾಟಗಾರ ರೈತರಿಗೆ ಪ್ರಶಸ್ತಿ ಪತ್ರ ವಿತರಿಸಿ, ಶುಭ ಹಾರೈಸಿದರು. ತೋಟಗಾರಿಕೆ ಇಲಾಖೆ ಡಿಡಿ ಕೃಷ್ಣ ಉಕ್ಕುಂದ, ವಿಷಯ ತಜ್ಞ ವಾಮನಮೂರ್ತಿ ಇತರ ಅಧಿಕಾರಿಗಳು ಇದ್ದರು.

160 ಟನ್ ಮಾವು ಮಾರಾಟ
12 ದಿನಗಳ ಮೇಳದಲ್ಲಿ 160 ಟನ್ ಮಾವು ಮಾರಾಟವಾಗಿದ್ದು, ಬರದಲ್ಲಿ ರೈತರಿಗೆ ವರವಾಗಿ ಪರಿಣಮಿಸಿತು. ಪ್ರಸಕ್ತ ವರ್ಷದಲ್ಲಿನ ಅಕಾಲಿಕ ಮಳೆ, ಬಿರುಗಾಳಿಗೆ ಮಾವಿನ ಹೂ, ಕಾಯಿ ಧರೆಗುರುಳಿ, ಬೆಳೆಗಾರರಿಗೆ ದೊಡ್ಡ ಹೊಡೆತ ಬಿದ್ದಿತ್ತು. ಹವಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಮಾವು ಬೆಳೆಯ ಇಳುವರಿ ಕೂಡ ಕುಂಠಿತವಾಗಿತ್ತು. ಮೇಳದಲ್ಲಿ ಮಾವಿನ ಹಣ್ಣುಗಳಿಗೆ ಬೇಡಿಕೆ ಹೆಚ್ಚಿತ್ತು. ಜನರ ಬೇಡಿಕೆಗೆ ತಕ್ಕಂತೆ ಹಣ್ಣು ಪೂರೈಸುವಲ್ಲಿ ರೈತರು ವಿಫಲರಾಗಿದ್ದರು. ಕೆಲ ರೈತರು ಮಾತ್ರ ಧಾರವಾಡ-ತುಮಕೂರು, ಹೈದರಾಬಾದ್‌ಗಳಿಂದ ಮಾವಿನ ಹಣ್ಣುಗಳನ್ನು ಆಮದು ಮಾಡಿಕೊಂಡು, ಗ್ರಾಹಕರಿಗೆ ಪೂರೈಸಿದರು. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ, ಅದೂ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳ ಪ್ರದರ್ಶನ, ಮಾರಾಟದ ವ್ಯವಸ್ಥೆ ಮಾಡಿದ್ದರಿಂದ ಖರೀದಿಗೆ ಜನ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರು.

1.50 ಕೋಟಿ ರೂ. ವ್ಯಾಪಾರ
ಮೇ 8ರಿಂದ 19ರವರೆಗೆ ನಡೆದ ಮಾವು ಮೇಳದಲ್ಲಿ 1.50 ಕೋಟಿ ರೂ.ನಷ್ಟು ವ್ಯಾಪಾರ ನಡೆದಿದೆ. ಮೇಳೆ ಆಯೋಜಿಸಿದ್ದ ತೋಟಗಾರಿಕೆ ಇಲಾಖೆ, ಮೇ 15ಕ್ಕೆ ಮುಕ್ತಾಯಗೊಳಿಸಲು ನಿರ್ಧರಿಸಿತ್ತು. ಆದರೆ, ಜನರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಮೇ 19ರವರೆಗೆ ವಿಸ್ತರಿಸಲಾಯಿತು. 60ಕ್ಕೂ ಹೆಚ್ಚು ರೈತರು ತಾವು ಬೆಳೆದ ಫಲವನ್ನು ಮಾರಾಟ ಮಾಡಿದ್ದಾರೆ. ರೈತರ ಬೆಳೆ ಮತ್ತು ಹೊರಗಡೆಯಿಂದ ತರಿಸಿದ್ದು ಸೇರಿ 160 ಟನ್ ಮಾವು ಮಾರಾಟವಾಗಿ, 1.50 ಕೋಟಿ ರೂ. ವ್ಯಾಪಾರ ನಡೆದಿದೆ. ಆಪೂಸ್, ಸಿಂಧೂರ, ಕೇಸರ್, ಬೇನಿಷಾನ್, ಕೇಸರ್, ದಶಹರಿ, ಆಪೂಸ್, ಮಲ್ಲಿಕಾ, ರಸಪೂರಿ, ಸುವರ್ಣರೇಖ, ಇಮಾಮ್ ಪಸಂದ್ ಸೇರಿ ಇತರ ತಳಿಯ ಹಣ್ಣುಗಳ ಮಾರಾಟ ನಡೆದಿದೆ. ಇವುಗಳಲ್ಲದೇ 100ಕ್ಕೂ ಹೆಚ್ಚು ತಳಿಗಳ ಪ್ರದರ್ಶನ, ಇತರ ಉತ್ಪನ್ನಗಳ ಮಾರಾಟವೂ ನಡೆದಿದೆ.

ಕೊಪ್ಪಳದ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದು ಇದು 3ನೇ ಬಾರಿಯ ಮಾವು ಮೇಳ. ಈ ಭಾರಿ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ತೀವ್ರ ಬರದಲ್ಲೂ 1.50 ಕೋಟಿ ರೂ. ವ್ಯಾಪಾರವಗಿದೆ. 160 ಟನ್ ಮಾವು ಮಾರಾಟವಾಗಿದೆ. ರೈತರಿಗೆ ಮತ್ತು ಗ್ರಾಹಕರಿಗೆ ಮೇಳದಿಂದ ಉಪಯೋಗವಾಗಿದೆ.
| ಕೃಷ್ಣ ಉಕ್ಕುಂದ ತೋಟಗಾರಿಕೆ ಇಲಾಖೆ ಡಿಡಿ, ಕೊಪ್ಪಳ

ಮೇಳದಲ್ಲಿ ನೈಸರ್ಗಿಕವಾಗಿ ಮಾಗಿಸಿದ ಹಾಗೂ ಉತ್ತಮ ಗುಣಮಟ್ಟದ ಹಣ್ಣುಗಳು ದೊರೆತಿವೆ. ಆದರೆ, ಜನರ ಬೇಡಿಕೆಗೆ ತಕ್ಕಂತೆ ಮೇಳದಲ್ಲಿ ಹಣ್ಣುಗಳ ಪೂರೈಕೆಯಾಗಲಿಲ್ಲ.
| ಮಂಜುನಾಥ ಕೊಪ್ಪಳದ ಗ್ರಾಹಕ


Leave a Reply

Your email address will not be published. Required fields are marked *