ಸಂಸದ ಸಂಗಣ್ಣ ಕರಡಿ ನಾಮಪತ್ರ ಸಲ್ಲಿಕೆ

ಕಮಲ ನಾಯಕರ ಶಕ್ತಿ ಪ್ರದರ್ಶನ | ಬೃಹತ್ ರೋಡ್ ಶೋ

ಕೊಪ್ಪಳ: ಕೊನೇ ಗಳಿಗೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಸಂಸದ ಸಂಗಣ್ಣ ಕರಡಿ ಬುಧವಾರ ಬೆಳಗ್ಗೆ 11 ಗಂಟೆಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಬಳಿಕ ನಗರದ ಗವಿಮಠದಿಂದ ಸಾವಿರಾರು ಕಾರ್ಯಕರ್ತರ ಸಮ್ಮುಖ ಅಶೋಕ ವೃತ್ತವರೆಗೆ ಬೃಹತ್ ರೋಡ್ ನಡೆಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಲಕ್ಷಣ ಸವದಿ ಸೇರಿ ಜಿಲ್ಲೆಯ ಬಿಜೆಪಿ ಶಾಸಕರು ರೋಡ್ ಶೋನಲ್ಲಿ ಭಾಗವಹಿಸಿ ಪಕ್ಷದ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು. ತೆರದ ವಾಹನದಲ್ಲಿ ನಾಯಕರು ರೋಡ್ ಶೋ ನಡೆಸಿದರು. ಅಲ್ಲಲ್ಲಿ ಅಭಿಮಾನಿಗಳು ಹೂವಿನ ಹಾರ ಹಾಕುವುದು, ಕೇಕ್ ಕತ್ತರಿಸುವುದು ಮಾಡಿದರು.

ದಾರಿಯುದ್ಧಕ್ಕೂ ಯುವಕರು ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿ ನಡೆದರು. ಮೆರವಣಿಗೆಯಲ್ಲಿ ಬೃಹತ್ ಗೊಂಬೆಗಳು ಕಂಡು ಬಂದವು. ಗವಿಸಿದ್ಧೇಶ್ವರನ ಆಶೀರ್ವಾದ ಪಡೆದು ಆರಂಭವಾದ ಮೆರವಣಿಗೆಯಲ್ಲಿ ಶಾಸಕ ಶ್ರೀರಾಮುಲು, ಮಾಜಿ ಸಚಿವ ಲಕ್ಷಣ ಸವದಿ, ಶಾಸಕ ಸೋಮಲಿಂಗಪ್ಪ ಇತರ ಮುಖಂಡರು ಭಾಗವಹಿಸಿದ್ದರು.