ಕೊಪ್ಪಳ: ನಗರದ ಪ್ರಶಾಂತ ಬಡಾವಣೆಯ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಸೋಮವಾರ ಶ್ರೀ ಕೃಷ್ಣಾಷ್ಟಮಿ ಆಚರಿಸಲಾಯಿತು. ಶ್ರೀಮದ್ಯೋಗಿಶ್ವರ ಯಾಜ್ಞವಲ್ಕ ಪ್ರತಿಷ್ಠಾನದಿಂದ ಮೂರು ದಿನ ಕಾರ್ಯಕ್ರಮ ಆಯೋಜಿಸಿದ್ದು, ಸೋಮವಾರ ಶ್ರೀ ಕೃಷ್ಣ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಲಾಯಿತು. ಮಕ್ಕಳು ಕೃಷ್ಣ, ರಾಧೆ ಛದ್ಮವೇಷ ಧರಿಸಿ ಗಮನ ಸೆಳೆದರು. ಬೆಳಗ್ಗೆ ಸುಪ್ರಭಾತ, ಪಂಚಾಮೃತ, ಸಹಸ್ರನಾಮ ಪಾರಾಯಣ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ದೇವಾಲಯಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.
ಸಂಸದ ರಾಜಶೇಖರ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಲ್ಜದ್ ಪಟೇಲ್ ಸೇರಿ ಇತರ ಗಣ್ಯರನ್ನು ಸನ್ಮಾನಿಸಲಾಯಿತು. ಪಂಡಿತ್ ರಘುಪ್ರೇಮಾಚಾರ್ಯ ಮುಳಗುಂದ ಅವರಿಂದ ಭಾಗವತ್ ಪ್ರವಚನ ಹಾಗೂ ಸಂಜೆ ತೊಟ್ಟಿಲು ಸೇವೆ, ತಡರಾತ್ರಿ ಹರಕೆ ಬಿಡುವ ಸೇವೆ ನಡೆಯಿತು. ಇಂದು ಸುಪ್ರಭಾತ, ನಿಮಾರ್ಲ್ಯಾಭಿಷೇಕ, ತೊಟ್ಟಿಲು ಸೇವೆ, ಪಂಚಾಮೃತ ಅಭಿಷೇಕ, ನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾದ ಜರುಗಲಿದೆ. ಸಂಜೆ 4ಕ್ಕೆ ಪ್ರವಚನ, ಸೇವಾಕರ್ತರಿಗೆ ಫಲ ಮಂತ್ರಾಕ್ಷತೆ, ಗ್ರಾಮ ಪ್ರದಕ್ಷಿಣೆ, ಗೋಪಾಲ ಕಾವಲಿ, ಪಲ್ಲಕ್ಕಿ ಸೇವೆ ಇರಲಿದೆ.