ಕಿಮ್ಸ್ ಸಮಸ್ಯೆಗೆ ಶೀಘ್ರ ಚಿಕಿತ್ಸೆ

ಕಾಲೇಜು, ಜಿಲ್ಲಾಸ್ಪತ್ರೆಗೆ ಭೇಟಿ>

ಕೊಪ್ಪಳ: ಕಿಮ್ಸ್ ಕಾಳೇಜು ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಸೇರಿ ಮೂಲ ಸೌಕರ್ಯ ಕೊರತೆಯಿದ್ದು, ಕೆಲ ತಿಂಗಳಲ್ಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ಹೇಳಿದರು.

ನಗರದ ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು.

ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೀರು, ಸಿಬ್ಬಂದಿ ಕೊರತೆ, ಕಟ್ಟಡ ಕೊರತೆ ಇರುವುದು ಗಮನಕ್ಕೆ ಬಂದಿದೆ. ಒಟ್ಟು 750 ಹಾಸಿಗೆ ಆಸ್ಪತ್ರೆ ಅಗತ್ಯವಿದ್ದು, 450 ಹಾಸಿಗೆ ಆಸ್ಪತ್ರೆ ಮಂಜೂರಾಗಿದ್ದು, 100 ಕೋಟಿ ರೂ. ಅನುದಾನ ನೀಡಲಾಗಿದೆ. ಜಾಗ ಅಂತಿಮಗೊಳಿಸುವುದು ಬಾಕಿಯಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, 3 ಹೆಚ್ಚುವರಿ ಹಾಸ್ಟೆಲ್ ನಿರ್ಮಾಣಕ್ಕೆ 20 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಸದ್ಯಕ್ಕೆ ಇರುವ ಕೋಣೆಗಳಲ್ಲಿ ಹೆಚ್ಚುವರಿ ಬೆಡ್ ಹಾಕಿ ಅನುಕೂಲ ಮಾಡಲಾಗುವುದು ಎಂದರು.

ಕಾಲೇಜಿನಲ್ಲಿ ನೀರಿನ ಕೊರತೆಯಿದ್ದು, ರೈಲ್ವೆ ಹಳಿ ಅಡ್ಡವಿರುವ ಕಾರಣ, ಪೈಪ್‌ಲೈನ್ ಮಾಡಲು ತೊಂದರೆಯಾಗಿದೆ. ಈ ಬಗ್ಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಡಿ ಗ್ರೂಪ್, ಬೋಧಕ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಲಾಗುವುದು. ಸುಪ್ರೀಂ ಕೋರ್ಟ್‌ಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದು, ಅವಧಿಯೊಳಗೆ ಪೂರೈಸಲಾಗುವುದು. ಎಂಸಿಐ ತಂಡಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗುವುದು. ಜಿಪಂ ಸಿಇಒ ಅವರಿಗೆ ಕಾಲೇಜು ಆಡಳಿತ ಮಂಡಳಿ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ ಎಂದರು.

ಕಿಮ್ಸ್ ಪ್ರಭಾರ ನಿರ್ದೇಶಕ ಡಾ.ಬಂಟ್, ಡಿಸಿ ಪಿ.ಸುನಿಲ್‌ಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ಡಾ.ದಾನರಡ್ಡಿ ಸೇರಿ ಇತರ ಸಿಬ್ಬಂದಿ ಇದ್ದರು.

ಇರುವ ಕಾಲೇಜುಗಳ ಬಲವರ್ಧನೆ: ಹೊಸ ಮೆಡಿಕಲ್ ಕಾಲೇಜುಗಳ ಆರಂಭ ಪ್ರಸ್ತಾವನೆ ಸದ್ಯಕ್ಕೆ ಇಲಾಖೆ ಕೈ ಬಿಟ್ಟಿದೆ ಎಂದು ಅಪರ ಮುಖ್ಯಕಾರ್ಯದರ್ಶಿ ವಿ.ಮಂಜುಳಾ ತಿಳಿಸಿದರು. ಈಗಾಗಲೇ ಆರಂಭಿಸಿರುವ ಕಾಲೇಜುಗಳಲ್ಲಿ ಸಾಕಷ್ಟು ಮೂಲಸೌಕರ್ಯ ಕೊರತೆಯಿದೆ. ಹೀಗಾಗಿ ಮೊದಲು ಇರುವ ಕಾಲೇಜುಗಳನ್ನು ಬಲವರ್ಧನೆಗೊಳಿಸಲು ನಿರ್ಧರಿಸಲಾಗಿದೆ. ಹೊಸ ಕಾಲೇಜು ನಿರ್ಮಾಣಕ್ಕೆ ಮೀಸಲಿರಿಸಿದ್ದ ಅನುದಾನ ಬಳಸಿಕೊಂಡು ಇರುವ ಕಾಲೇಜುಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದರು.