ಕೊಪ್ಪಳ: ಕಾರಟಗಿ ತಾಲೂಕಿನ ಮುಷ್ಟೂರು ಗ್ರಾಪಂನಲ್ಲಿ ಸಾಮಗ್ರಿ ಪೂರೈಸಿದರೂ ಬಿಲ್ ಮಾಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೆ ನನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆಂದು ಗುತ್ತಿಗೆದಾರ ಯರಿಸ್ವಾಮಿ ಕುಂಟೋಜಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಷ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಮಗ್ರಿ ಪೂರೈಸಿದ್ದೇನೆ. ಶೇ.90 ಸಾಮಗ್ರಿ ಪೂರೈಸಿದರೂ ಬಿಲ್ ಪಾವತಿಸಿರಲಿಲ್ಲ. ಪಾವತಿಸುವಂತೆ ಬೆನ್ನುಬಿದ್ದಾಗ ತಾಂತ್ರಿಕ ಸಹಾಯಕ ವಿಷ್ಣು ನಾಯಕ ಲಂಚದ ಬೇಡಿಕೆ ಇಟ್ಟಿದ್ದರು. ಫೊನ್ ಪೇ ಮೂಲಕ 12 ಸಾವಿರ ರೂ. ವರ್ಗಾಯಿಸಿರುವೆ. 15 ಲಕ್ಷ ರೂ.ನಲ್ಲಿ 4.80 ಲಕ್ಷ ರೂ. ಬಿಲ್ ಪಾವತಿಸಿದ್ದಾರೆ. ಬಾಕಿ ಹಣವನ್ನು ರೆಹಾನ್ ಎಂಟರ್‌ಪ್ರೈಸಸ್‌ಗೆ ವರ್ಗಾಯಿಸಿದ್ದಾರೆ. ಇದನ್ನು ಪ್ರಶ್ನಿಸಿ ದೂರು ನೀಡಿದ್ದೇನೆ. ದೂರು ಆಧರಿಸಿ ಐಎಎಸ್ ಅಧಿಕಾರಿ ಹೇಮಂತ್ ಎನ್. ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ನಾನೂ ವೈಯಕ್ತಿಕವಾಗಿ ಜಿಪಂ ಸಿಇಒ ಫೌಜಿಯಾ ತರನ್ನುಮ್‌ಗೆ ಮನವಿ ಸಲ್ಲಿಸಿರುವೆ. ಆದರೂ, ಕ್ರಮ ಕೈಗೊಂಡಿಲ್ಲ. ಬೇಸತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರಬರೆದಿರುವೆ ಎಂದರು.
ಇದರ ಬೆನ್ನಲ್ಲೇ ಸಿಇಒ ಆದೇಶದ ಮೇರೆಗೆ ಕಾರಟಗಿ ತಾಪಂ ಇಒ ಡಾ.ಡಿ.ಮೋಹನ್, ನನ್ನ ಹಾಗೂ ಜೆಇ ವಿಷ್ಣು ನಾಯಕ ವಿರುದ್ಧ ಪ್ರಕರಣ ದಾಖಲಿಸಿ ಬೆದರಿಕೆ ಒಡ್ಡುತ್ತಿದ್ದಾರೆ. ಗ್ರಾಪಂ ಅಧ್ಯಕ್ಷ ಆದಿಲ್ ಪಾಷಾ, ಪಿಡಿಒ ಪ್ರಕಾಶ ಸಜ್ಜನ್ ಸಹ ಲಂಚದ ಬೇಡಿಕೆ ಇಟ್ಟಿದ್ದಾರೆ. ಶಾಸಕ ಬಸವರಾಜ ದಢೇಸುಗೂರು ಸೇರಿ ಇತರ ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಅಧಿಕಾರಿಗಳು ಬಿಲ್ ಪಾವತಿಸುತ್ತಿಲ್ಲ. ಕೆಲಸ ಮಾಡಿದ್ದಕ್ಕೆ ನನ್ನ ಬಳಿ ದಾಖಲೆಗಳಿದ್ದು, ತನಿಖಾ ವರದಿಯೂ ಇದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡುತ್ತೇನೆಂದು ತಿಳಿಸಿದರು.