ಕೆಲಸ ಸಣ್ಣದು, ದೊಡ್ಡದೆಂದು ಕೀಳರಿಮೆ ಇಟ್ಟುಕೊಳ್ಳದಿರಿ

ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ ಹೇಳಿಕೆ |ಜಿಲ್ಲಾ ಮಟ್ಟದ ಉದ್ಯೋಗ ಮೇಳ

ಕೊಪ್ಪಳ: ಆಧುನಿಕ ಯುಗದಲ್ಲಿ ಉದ್ಯೋಗಕ್ಕಾಗಿ ತೀವ್ರ ಪೈಪೋಟಿಯಿದ್ದು, ಉದ್ಯೋಗ ಆಕಾಂಕ್ಷಿಗಳು ಯಾವುದೇ ಕೆಲಸ ಸಿಕ್ಕರೂ ಮಾಡುಬೇಕೆ ವಿನಃ ಕೆಲಸ ಸಣ್ಣದು, ದೊಡ್ಡದೆಂದು ಕೀಳರಿಮೆ ಇಟ್ಟುಕೊಳ್ಳಬಾರದು ಎಂದು ಜಿಪಂ ಅಧ್ಯಕ್ಷ ಎಚ್.ವಿಶ್ವನಾಥ ರಡ್ಡಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ನಿರುದ್ಯೋಗಿಗಳಿಗೆ ಸಹಕಾರಿಯಾಗಲು ಜಿಲ್ಲಾಡಳಿತ ಉದ್ಯೋಗ ಮೇಳ ಹಮ್ಮಿಕೊಂಡಿದೆ. ಯುವ ಜನಾಂಗ ಇದರ ಸದುಪಯೋಗ ಪಡೆಯಬೇಕು. ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಕೈಚೆಲ್ಲಬಾರದು ಎಂದರು.

ಜಿಪಂ ಸಿಇಒ ಆರ್.ಎನ್.ಪೆದ್ದಪ್ಪಯ್ಯ ಮಾತನಾಡಿ, ಆಧುನಿಕ ಯುಗದಲ್ಲಿ ಉದ್ಯೋಗದ ಸಮಸ್ಯೆಯಿದೆ. ಕೆಪಿಎಸ್ಸಿ, ಯುಪಿಎಸ್ಸಿಗಳಲ್ಲಿ 1 ಸಾವಿರ ಹುದ್ದೆಗಳಿಗೆ ಸರಿ ಸುಮಾರು 3 ಲಕ್ಷ ಅರ್ಜಿ ಹಾಕಲಾಗುತ್ತದೆ. ಪ್ರತಿಯೊಬ್ಬರಿಗೂ ಸರ್ಕಾರಿ ನೌಕರಿ ದೊರೆಯಲು ಸಾಧ್ಯವಿಲ್ಲ. ಸರ್ಕಾರಿ ನೌಕರಿ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಯಾರೂ, ನಿರಾಶೆಯಾಗಬಾರದು. ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದು ಸಣ್ಣ ಉದ್ಯಮ ಪ್ರಾರಂಭಿಸಿ ಯಶ ಕಂಡವರು ಅನೇಕರಿದ್ದಾರೆ. ನೀವುಗಳು ಸಹ ಉದ್ಯೋಗ ಮೇಳದ ಸದುಪಯೋಗ ಪಡೆಯುವುದರ ಜತೆಗೆ ಸ್ವಯಂ ಉದ್ಯೋಗ ಪ್ರಾರಂಭಿಸುವ ಕುರಿತು ಗಮನ ಹರಿಸಬೇಕು ಎಂದರು.

ಎಡಿಸಿ ಸಿ.ಡಿ. ಗೀತಾ ಮಾತನಾಡಿ, ನಿರುದ್ಯೋಗಗಳ ಅನುಕೂಲಕ್ಕೆ ಮೇಳ ಸಲಹಾಕರಿಯಾಗಿದೆ ಎಂದರು. ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪಿ.ಎಸ್.ಹಟ್ಟಪ್ಪ, ಎಸ್ಪಿ ರೇಣುಕಾ ಸುಕುಮಾರ್, ತಹಸೀಲ್ದಾರ್ ಜೆ.ಬಿ.ಮಜ್ಜಿಗೆ, ಜಿಲ್ಲಾ ಕೌಶಾಲಾಭಿವೃದ್ಧಿ ಅಧಿಕಾರಿ ಭೀಮನಗೌಡ ಹೊಸಮನಿ, ಸಂಪನ್ಮೂಲ ವ್ಯಕ್ತಿಗಳಾದ ವಿಶ್ವನಾಥ, ಸಾಧನ ಕೋಟೆ, ತೇಜಸ್ವಿನಿ ಸೇರಿ ಇತರರಿದ್ದರು.