8 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನ- ಮಾಜಿ ಸಚಿವ ಶಿವರಾಜ ತಂಗಡಗಿ ಭವಿಷ್ಯ

ಕಮಲ ಪಕ್ಷದಿಂದ ಹೈ.ಕ.ಭಾಗಕ್ಕೆ ಅನ್ಯಾಯ

ಕೊಪ್ಪಳ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎಂಟು ತಿಂಗಳಲ್ಲಿ ಪತನವಾಗಲಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದರು.

ಸಚಿವ ಸಂಪುಟದಲ್ಲಿ ಹೈಕ ಪ್ರದೇಶಕ್ಕೆ ಒಂದ ಸ್ಥಾನ ನೀಡುವ ಮೂಲಕ ಬಿಜೆಪಿ ಈ ಭಾಗವನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಹಿಂದೆ ಶಾಸಕ ಬಿ. ಶ್ರರಾಮುಲುರನ್ನು ಡಿಸಿಎಂ ಮಾಡುವುದಾಗಿ ಘೋಷಿಸಿದ್ದ ಬಿಜೆಪಿ, ಮಾತು ತಪ್ಪಿದೆ. ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಲ್ಲಿ ಮಾತ್ರ ಚತುರರು. ಸಚಿವ ಸಂಪುಟ ವಿಸ್ತರಣೆಯಲ್ಲಿ ಭೋವಿ, ದಲಿತ ಸಮುದಾಯವನ್ನು ಕೂಡ ನಿರ್ಲಕ್ಷ್ಯ ಮಾಡಲಾಗಿದೆ. ಎಲ್ಲ ಸಮುದಾಯಗಳು ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿವೆ ಎಂದರು.

ಅಪರೇಷನ್ ಕಮಲ ಹಾಗೂ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಮೊದಲು ಸಿಬಿಐ ತನಿಖೆಯಾಗಲಿ. ಕೇಂದ್ರದ ಆಣತೆಯಂತೆ ಸಿಬಿಐ ಕಾರ್ಯ ನಿರ್ವಹಿಸುತ್ತಿದೆ. ಇಡಿ ಹಾಗೂ ಸಿಬಿಐ ಕಿರಿಕಿರಿಗೆ ದೇಶದಲ್ಲಿ ಉದ್ಯಮಿಗಳು ಸಾಯುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಈವರೆಗೆ ಕೇಂದ್ರ ಸರ್ಕಾರ ನಯಾ ಪೈಸೆ ಹಣ ನೀಡಿಲ್ಲ. ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ನೆರೆ ಪರಿಹಾರ ಘೋಷಿಸಲಿಲ್ಲ. ಅದೇ ಗುಜರಾತ್, ಮಹಾರಾಷ್ಟ್ರ, ಕೇರಳದಲ್ಲಿ ನೆರೆ ಬಂದರೆ ಕೇಂದ್ರ ಶೀಘ್ರ ಪರಿಹಾರ ಘೋಷಿಸುತ್ತದೆ. ನಮ್ಮ ರಾಜ್ಯದ ಬಗ್ಗೆ ಮಾತ್ರ ಅಸಡ್ಡೆ ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುಂಗಭದ್ರಾ ಜಲಾಶಯ ವ್ಯಾಪ್ತಿಯ ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯುತ್ತಾರೆ ಎನ್ನುವ ಬಗ್ಗೆ ತಂಗಡಗಿ ಹೇಳಲಿ ಎಂದು ಹೇಳಿದ್ದ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಮೊದಲು ಕ್ಷೇತ್ರದ ಮರ್ಯಾದೆ ಉಳಿಸುವ ಕೆಲಸ ಮಾಡಲಿ. ನಾನು ಕೃಷಿ ಮಾಡುತ್ತೇನೆ. ತುಂಗಭದ್ರಾ ಭಾಗದಲ್ಲಿ ಭತ್ತ, ಕಬ್ಬು ಸೇರಿ ಇತರೆ ಬೆಳೆ ಬೆಳೆಯುತ್ತಾರೆ ಎಂಬುದು ನನಗೆ ಗೊತ್ತಿದೆ.
| ಶಿವರಾಜ ತಂಗಡಗಿ ಮಾಜಿ ಸಚಿವ

Leave a Reply

Your email address will not be published. Required fields are marked *