ಕೊಪ್ಪಳ: ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಆರೋಪಿಸಿದರು.
ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಮಾತನಾಡಿದರು. ಜಿಲ್ಲಾಡಳಿತದಿಂದ ಸೋಂಕಿತರ ಚಿಕಿತ್ಸೆಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಸರ್ಕಾರದಿಂದ ಆಮ್ಲಜನಕ, ಔಷಧ ಸೇರಿ ಅಗತ್ಯ ಸೌಲಭ್ಯ ಪೂರೈಕೆಯಾಗುತ್ತಿಲ್ಲ. ಕೇಂದ್ರ ಸರ್ಕಾರ ನೀಡಿರುವ ವೆಂಟಿಲೇಟರ್‌ಗಳು ಗುಣಮಟ್ಟ ಹೊಂದಿಲ್ಲ. ಕೇಂದ್ರ ಸರ್ಕಾರ ಲಸಿಕೆ ನೀಡಲು ವಿಳಂಬ ಮಾಡಿದ್ದರಿಂದ ಹೆಚ್ಚಿನ ಜನರು ಲಸಿಕೆ ಪಡೆಯಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕೆ ಕೇವಲ 2ರಿಂದ 3 ಸಾವಿರ ರೂ. ಪರಿಹಾರ ಘೋಷಿಸಿದೆ. ಸರ್ಕಾರದ ಪರಿಹಾರ ಮೊತ್ತ ಸೋಂಕಿತರ ಸಿ.ಟಿ. ಸ್ಕಾೃನ್‌ಗೆ ಆಗುವುದಿಲ್ಲ. ಪಡಿತರದೊಂದಿಗೆ ಕನಿಷ್ಠ 10 ಸಾವಿರ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ನೆರೆ ಬಂದಾಗ ಬಾರದ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಹ ವೀಕ್ಷಣೆಗೆ ಹೋಗಿದ್ದಾರೆ. ಸಮೀಕ್ಷೆ ಸ್ಥಳದಲ್ಲೇ ಒಂದು ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ. ದೇಶದಲ್ಲಿ ಗುಜರಾತ್ ಹಾಗೂ ಇತರ ರಾಜ್ಯಗಳಿಗೆ ಪ್ರತ್ಯೇಕ ಕಾನೂನುಗಳಿವೆ ಎಂಬುದನ್ನು ಪ್ರಧಾನಿ ನಡೆ ತೋರಿಸಿಕೊಟ್ಟಿದೆ. ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಟೀಕಿಸಿದರು.