ಅಜ್ಜನ ಜಾತ್ರೆಗೆ ಡಿಜಿಟಲ್ ಟಚ್

ವೆಬ್, ಫೇಸ್‌ಬುಕ್‌ನಲ್ಲಿ ಜಾತ್ರೆ ಲೈವ್ | ಮಠದ ಆವರಣದಲ್ಲಿ ಸಂಭ್ರಮ

ಕೊಪ್ಪಳ: ದಕ್ಷಿಣ ಕುಂಭ ಖ್ಯಾತಿಯ ಗವಿಸಿದ್ಧೇಶ್ವರ ಜಾತ್ರೆಗೆ ತಂತ್ರಜ್ಞಾನದ ಟಚ್ ನೀಡಿದ್ದು, ಭಕ್ತರು ಜಾತ್ರೆಯ ಕ್ಷಣ ಕ್ಷಣದ ಮಾಹಿತಿ ಕುಳಿತಲ್ಲೇ ನೋಡಬಹುದು.

ಜ.22ರಿಂದ ಮೂರು ದಿನಗಳ ಕಾಲ ನಡೆಯುವ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ದೂರದ ಊರಿನ ಭಕ್ತರು ಕುಳಿತಲ್ಲೇ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಲಾಗಿದೆ. ಮಠದ ವೆಬ್‌ಸೈಟ್(ತಿತಿತಿ.ಚಿಚಿಣಞಠಿಠಿಚಿಟ.ಛಿ)ನಲ್ಲಿ ಮಹಾರಥೋತ್ಸವದಿಂದ ಹಿಡಿದು ಎಲ್ಲ ಕಾರ್ಯಕ್ರಮಗಳ ಮಾಹಿತಿ ಪಡೆಯಬಹುದು. ಅಲ್ಲದೇ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ಸಹ ರಚಿಸಲಾಗಿದೆ. (ವಾಟ್ಸಾಪ್ ಸಂಖ್ಯೆ 7483263004) ಸಂಖ್ಯೆ ಸೇವ್ ಮಾಡಿಕೊಂಡು ತಮ್ಮ ಹೆಸರು ಮತ್ತು ವಿಳಾಸ ಮೆಸೇಜ್ ಮಾಡಿದಲ್ಲಿ ವಾಟ್ಸಾಪ್‌ನಲ್ಲೂ ಜಾತ್ರೆ ಮಾಹಿತಿ ಸಿಗಲಿದೆ.

ಜತೆಗೆ ಮಠದಲ್ಲಿ ಲಭ್ಯವಿರುವ ಭಕ್ತರ ದೂರವಾಣಿ ಸಂಖ್ಯೆಗಳಿಗೆ ಆಮಂತ್ರಣದ ಮುದ್ರಿತ ಧ್ವನಿ ಕರೆ, ಜಾತ್ರೆ ಮಾಹಿತಿ ಎಸ್.ಎಂ.ಎಸ್ ರೂಪದಲ್ಲಿ ಕಳುಹಿಸಲಾಗುವುದು. ಫೇಸ್‌ಬುಕ್ ಪೇಜ್ ಸಹ ರಚಿಸಿದ್ದು ಜಾಲ ತಾಣ ಮೂಲಕ ಜಾತ್ರೆ ನೇರ ಪ್ರಸಾರ ವೀಕ್ಷಿಸಬಹುದು.

ಶ್ರೀಗಳಿಗೆ ಕುರ್ಚಿ ಅರ್ಪಣೆ
ಕೊಪ್ಪಳ ತಾಲೂಕಿನ ಡಂಬ್ರಳ್ಳಿ ಗ್ರಾಮದ ಬಸನಗೌಡ ಕರಡ್ಡಿ ಎಂಬುವರು ಗವಿಸಿದ್ಧೇಶ್ವರ ಶ್ರೀಗಳಿಗೆ ಕುರ್ಚಿ ಅರ್ಪಿಸಿದರು. ಆಸನವು ಮರಗಳ ರಾಣಿ ಎಂದು ಕರೆಯಿಸಿಕೊಳ್ಳುವ ರೋಜ್‌ವುಡ್ ಕಟ್ಟಿಗೆಯಿಂದ ತಯಾರಿಸಲಾಗಿದೆ. ಸುಮಾರು 45 ಕೆಜಿ ತೂಕ ಹೊಂದಿದ್ದು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದ ತನ್ವೀರ್ ಬಾಷಾ ಎಂಬ ಕುಶಲಕರ್ಮಿ ಆಸನ ಸಿದ್ಧಪಡಿಸಿದ್ದಾರೆ.

ಜಿಲ್ಲಾಧಿಕಾರಿ ಭೇಟಿ
ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ಸಿದ್ಧತೆ ಭರದಿಂದ ಸಾಗಿವೆ. ಈ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಮಠಕ್ಕೆ ಭೇಟಿ ನೀಡಿ ಸಿದ್ಧತಾ ಕಾಮಗಾರಿ ಪರಿಶೀಲಿಸಿದರು. ಪಾರ್ಕಿಂಗ್, ದಾಸೋಹ, ಅಂಗಡಿ, ಮಳಿಗೆ ಸಾಲು ಸೇರಿ ರಸ್ತೆ ಕಾಮಗಾರಿ ಎಲ್ಲ ವೀಕ್ಷಿಸಿ ಮಾಹಿತಿ ಪಡೆದರು. ಶ್ರೀಗಳು ಎಲ್ಲ ಸಿದ್ಧತೆಗಳ ಕುರಿತು ವಿವರಿಸಿದರು. ಎಡಿಸಿ ಸಿ.ಡಿ.ಗೀತಾ, ಡಿವೈಎಸ್ಪಿ ಎಸ್.ಎಂ.ಸಂದಿಗವಾಡ ಸೇರಿ ನಗರಸಭೆ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *