ನಾಲಾಯಕ್ ನಾಯಕ ರಾಹುಲ್ ಗಾಂಧಿ

 ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶ >>

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ರಾಹುಲ್ ಗಾಂಧಿ ಒಬ್ಬ ನಾಲಾಯಕ್ ನಾಯಕ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿರುವಷ್ಟು ದಿನ ಆ ಪಕ್ಷ ಅವನತಿ ಹೊಂದುತ್ತದೆ. ರಾಹುಲ್ ಗಾಂಧಿ ಮೈಂಡ್ ಇನ್ನು ಮೆಚ್ಯುರ್ ಆಗಿಲ್ಲ. ಅದಕ್ಕೆ ಆ ರೀತಿ ಮಾತನಾಡುತ್ತಾರೆ. ಒಬ್ಬ ಪ್ರಧಾನಿ ಬಗ್ಗೆ ಹೇಗೆ ಮಾತನಾಡಬೇಕೆಂದು ಅವರಿಗೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಶುಕ್ರವಾರರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಬರ ಆವರಿಸಿದ್ದು, ಜನರು ಗುಳೆ ಹೋಗುತ್ತಿದ್ದಾರೆ. ಆದರೆ, ಸಿಎಂ ಕುಮಾರಸ್ವಾಮಿ ದೇಶದಲ್ಲಿನ ದೇವಸ್ಥಾನಗಳಿಗೆ ಟೆಂಪಲ್ ರನ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಜನರ ಬದಲು ದೇವರ ಆಶೀರ್ವಾದದಿಂದ ಅಧಿಕಾರ ಸಿಕ್ಕಿದೆ ಎಂದು ಅವರೇ ಹೇಳಿಕೊಳ್ಳುತ್ತಾರೆ. ಅಭಿವೃದ್ಧಿ ಮಾಡುವುದು ಬಿಟ್ಟು ದೇವಸ್ಥಾನ ತಿರುಗುತ್ತಿದ್ದು, ಅಧಿಕಾರವನ್ನು ಸಚಿವ ರೇವಣ್ಣ ಮಾಡುತ್ತಿರುವಂತಿದೆ. ಸರ್ಕಾರದಲ್ಲಿನ ಮಂತ್ರಿಗಳು ಪರಸ್ಪರ ಕಿತ್ತಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರೆ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಕೈಗೂ ಕುಮಾರಸ್ವಾಮಿ ಸಿಗುತ್ತಿಲ್ಲ. ವಿಜಯಪುರದ ಕಾಂಗ್ರೆಸ್ ಶಾಸಕ ಯಶವಂತರಾಯರು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲವೆಂದು ಆರೋಪಿಸಿದ್ದಾರೆ ಎಂದು ಸಮರ್ಥನೆ ನೀಡಿದರು.

ರಾಜ್ಯದಲ್ಲಿ ಸಾಲಮನ್ನಾ ಘೋಷಣೆಯಾದರೂ ರೈತರ ಆತ್ಮಹತ್ಯೆ ಮುಂದುವರಿದಿದೆ. ಸರ್ಕಾರವು ಬ್ಯಾಂಕ್‌ಗಳಿಗೆ ಹಣ ತುಂಬುವ ಬದಲು, ನೋಟಿಸ್ ನೀಡಿದ ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್ ನೀಡದಂತೆ ಸಿಎಂ ಎಚ್ಚರಿಕೆ ನೀಡುತ್ತಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗದೆ ಅವನತಿಯತ್ತ ಸಾಗುತ್ತಿರುವ ಸರ್ಕಾರವನ್ನು ಇದೇ ಮೊದಲು ನೋಡುತ್ತಿದ್ದೇನೆ ಎಂದರು.

ಸಚಿವ ಡಿಕೆಶಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ವಿರುದ್ಧ ಸಾಕಷ್ಟು ಕೇಸ್‌ಗಳಿಗೆ ಬೇಲ್ ಮೇಲೆ ಹೊರಗಿದ್ದಾರೆ. ಬೇಲ್ ಇಲ್ಲದಿದ್ದರೆ ಜೈಲ್‌ನಲ್ಲಿರುತ್ತಿದ್ದರು ಎಂದು ಟಾಂಗ್ ನೀಡಿದರು. ಅಲ್ಲದೇ ರಾಜ್ಯಾದ್ಯಂತ ಹಿಂದೂ ಕಾರ್ಯಕರ್ತರ ಮೇಲೆ ದೂರು ದಾಖಲಿಸುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.