ಶಿಕ್ಷಣ ಕ್ಷೇತ್ರದಲ್ಲಿ ಸೇವಾ ಮನೋಭಾವ ಮುಖ್ಯ

ಕೊಪ್ಪಳ : ಶಿಕ್ಷಣ ಕ್ಷೇತ್ರದಲ್ಲಿ ಸೇವಾ ಮನೋಭಾವ ಮುಖ್ಯ ಎಂದು ಗ್ರಾಮವಿಕಾಸ ವಿಕಲ್ಪದ ಹಿರಿಯ ಕಾರ್ಯಕರ್ತ ರಾಜಶೇಖರಜಿ ಹೇಳಿದರು.

ತಾಲೂಕಿನ ಭಾಗ್ಯನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೇವಾಭಾರತಿ ಟ್ರಸ್ಟ್, ವಿದ್ಯಾವಿಕಾಸ ಪ್ರಾಕಲ್ಪ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಉಚಿತ ಮನೆಪಾಠ ಹಾಗೂ ಸಂಸ್ಕಾರ ಕೇಂದ್ರಗಳ ವಾರ್ಷಿಕೋತ್ಸವ-2019’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಸಮಾಜ ಬದಲಾವಣೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಅದರ ಜತೆ ಸಂಸ್ಕಾರವೂ ಸೇರಬೇಕು. ವಿದ್ಯಾರ್ಥಿಗಳು ತಂದೆ-ತಾಯಿಗಳನ್ನು ಗೌರವಿಸುವ ಗುಣ ಬೆಳಸಿಕೊಳ್ಳಬೇಕು. ದೇಶದ ಪುರಾತನ ಆಚಾರ-ವಿಚಾರ, ಸಂಸ್ಕೃತವನ್ನು ನಾವುಗಳು ಮರೆಯಬಾರದು ಎಂದರು.

ಸೇವಾಭಾರತಿ ಟ್ರಸ್ಟ್‌ನ ವಿಶ್ವಸ್ಥ ಶ್ರೀಧರ ನಾಡಿಗೇರ ಮಾತನಾಡಿ, ಪಾಲಕರು ಮಕ್ಕಳಿಗಾಗಿ ಪಾಲಕರು ಆಸ್ತಿ ಮಾಡಬೇಡಿ, ಆಸ್ತಿ ಜೀವನದಲ್ಲಿ ಶಾಶ್ವತವಲ್ಲ. ಅದರ ಬದಲಾಗಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಆಗ ಮಕ್ಕಳ ಭವಿಷ್ಯವೂ ಉಜ್ವಲವಾಗಿರುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಕಲಿಸಬೇಕು. ಉತ್ತಮ ಸಂಸ್ಕಾರದಿಂದ ಮಕ್ಕಳು ಬೆಳೆದರೆ, ಸಮಾಜಕ್ಕೆ ಉತ್ತಮ ಕೂಡುಗೆ ನೀಡುತ್ತಾರೆ. ಜಗತ್ತಿನಲ್ಲಿಂದು ಸಾಮರಸ್ಯದ ಕೊರತೆಯಿದೆ. ಜಾತಿ-ಮತ, ಧರ್ಮವೆಂಬ ಸಂಕೋಲೆಯಿಂದ ನಾವು ಹೊರಬರಬೇಕಿದೆ ಎಂದರು.

ಈ ವೇಳೆ 11 ಕೇಂದ್ರಗಳ ನೂರಾರು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನಾನಾ ವೇಷ ಪ್ರದರ್ಶನ, ಮಾತೃ ಭೋಜನ ಕಾರ್ಯಕ್ರಮ ಜರುಗಿತು. ಭಾಗ್ಯನಗರದ ಜ್ಞಾನಬಂಧು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಕೋಟ್ರೇಶ್, ಸೇವಾ ಭಾರತಿ ಟ್ರಸ್ಟ್‌ನ ಪ್ರಾಣೇಶ್ ಜೋಶಿ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್ ಇತರರು ಇದ್ದರು.