ಬರ ಪರಿಹಾರ ಹಣ ಜಮೆ ಮಾಡುವಂತೆ ಪಟ್ಟು

<ಬರ ಪರಿಹಾರ ಹಣ ಜಮೆ ಮಾಡುವಂತೆ ಪಟ್ಟು>

ಕೊಪ್ಪಳ : ಜಿಲ್ಲೆಯ ರೈತರಿಗೆ ಬರ ಪರಿಹಾರದ ಹಣವನ್ನು ಅತೀ ಶೀಘ್ರ ಅವರವರ ಖಾತೆಗಳಿಗೆ ಜಮೆ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಡಿ.ಗೀತಾಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಬರ ಆವರಿಸಿದ್ದು, ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಬೆಳೆಗಳಿಗೆ ವ್ಯಯಿಸಿದ ಹಣ ಕೂಡ ಹಿಂತಿರುಗಿಲ್ಲ. ಸದ್ಯ ಜೀವನ ನಡೆಸಲು ಕೂಡ ರೈತರ ಬಳಿ ಹಣವಿಲ್ಲ. ಬರದ ಹಿನ್ನೆಲೆಯಲ್ಲಿ ವಿವಿಧೆಡೆ ಜನರು ಗುಳೆ ಹೊರಟಿದ್ದಾರೆ. ಕೆಲವೆಡೆ ಬಡವರು ಕೂಲಿ ಕೆಲಸ ಮಾಡಲು ಸಿದ್ಧವಿದ್ದರೂ, ಸರ್ಕಾರದಿಂದ ಕೂಲಿ ಕೆಲಸ ದೊರೆಯುತ್ತಿಲ್ಲ. ಅನ್ನದಾತರೆಲ್ಲರೂ ಬರ ಪರಿಹಾರ ಹಣವನ್ನೇ ನಂಬಿಕೊಂಡು ದಿನ ಕಳೆಯುತ್ತಿದ್ದಾರೆ. ಶೀಘ್ರ ಬರ ಪರಿಹಾರ ಹಣ ಬಿಡುಗಡೆಯಾದರೆ, ರೈತರಿಗೆ ನೆರವಾಗಲಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಹಸಿರು ಸೇನೆ ಜಿಲ್ಲಾಧ್ಯಕ್ಷ ಅಂದಪ್ಪ ಕೋಳೂರು, ಚಿಕ್ಕೆನೆಕೊಪ್ಪದ ರೈತ ಮುಖಂಡರಾದ ಶಂಕ್ರಪ್ಪ ವಕ್ಕಳದ, ಹರೀಶ್ ವಕ್ಕಳದ ಇತರರು ಇದ್ದರು.