ವೈದ್ಯರ ಗೈರು ಖಂಡಿಸಿ ಪ್ರತಿಭಟನೆ

ಕೊಪ್ಪಳ: ಸತ್ತ ಕುರಿ, ದನಗಳ ಶವ ಪರೀಕ್ಷೆ ಮಾಡಲು ವೈದ್ಯರಿಲ್ಲವೆಂದು ಆರೋಪಿಸಿ ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳ ಕುರಿಗಾಹಿಗಳು ನಗರದ ತಾಲೂಕು ಪಶು ಆಸ್ಪತ್ರೆ ಮುಂಭಾಗ ಸೋಮವಾರ ಕುರಿಗಳ ಶವವಿರಿಸಿ ಪ್ರತಿಭಟನೆ ನಡೆಸಿದರು.

ವಿವಿಧ ಕಾಯಿಲೆಗಳಿಂದ ಕುರಿಗಳು ಸತ್ತಿದ್ದು, ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರೆ ಮಾತ್ರ ಪರಿಹಾರ ಬರಲಿದೆ. ಆದರೆ, ಹೋಬಳಿ ಕೇಂದ್ರ ಹಾಗೂ ದೊಡ್ಡ ಗ್ರಾಮಗಳಲ್ಲಿ ವೈದ್ಯರ ಕೊರತೆಯಿದೆ. ಹೀಗಾಗಿ ರೈತರು ಕೊಪ್ಪಳಕ್ಕೆ ಬಂದು ಕುರಿಗಳ ಶವಪರೀಕ್ಷೆ ಮಾಡಿಸಬೇಕು. ಆದರೆ, ನಾವು ಬಂದಾಗ ವೈದ್ಯರಿರುವುದಿಲ್ಲ. ಇಂದು ಸಹ ಸುಮಾರು 40ಕ್ಕೂ ಹೆಚ್ಚು ಕುರಿಗಳ ಶವ ಪರೀಕ್ಷೆ ಮಾಡಿಸಬೇಕಿದ್ದು, ವೈದ್ಯರೆ ಸಿಗುತ್ತಿಲ್ಲ. ಸತ್ತ ಕುರಿಗಳ ಪರಿಹಾರವೂ ಸಕಾಲಕ್ಕೆ ಬರುತ್ತಿಲ್ಲವೆಂದು ಕುರಿಗಾಹಿಗಳು ಆರೋಪಿಸಿದರು. ಅಲ್ಲದೆ, ತಕ್ಷಣ ವೈದ್ಯರು ಆಗಮಿಸಬೇಕೆಂದು ಪಟ್ಟು ಹಿಡಿದರು.

ಪಶುವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪಶುಪಾಲನ ಇಲಾಖೆ ಸಿಬ್ಬಂದಿ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಖಾಲಿಯಾಗಿತ್ತು. ಆದರೆ, ದೂರದ ಊರಿಗಳಿಂದ ರೈತರು ಬಂದಿದ್ದು, ವೈದ್ಯರು ಆಗಮಿಸಬೇಕೆಂದು ರೈತರು ಒತ್ತಾಯಿಸಿದರು.

ಪ್ರತಿಭಟನೆ ವಿಷಯ ತಿಳಿದ ತಾಲೂಕು ಪಶುವೈದ್ಯಾಧಿಕಾರಿ ಡಾ.ಶಿವರಾಜ ಶೆಟ್ಟರ್ ಹಾಗೂ ಇತರರು ಆಸ್ಪತ್ರೆಗೆ ಧಾವಿಸಿದರು. ಗುಡದಪ್ಪ ಹಲಗೇರಿ, ಸಿದ್ಧಪ್ಪ ಲಂಕಿ, ಪರಮೇಶ್ವರಪ್ಪ ದೊಡ್ಮನಿ, ನಿಂಗಪ್ಪ, ಯಮನಪ್ಪ ಸೇರಿ ಹಲಗೇರಿ, ಕಾಮನೂರು, ಭಿಮನೂರು, ನಿಂಗಾಪೂರ ಸೇರಿ ವಿವಿಧ ಗ್ರಾಮಗಳ ಕುರಿಗಾಹಿಗಳಿದ್ದರು.

Leave a Reply

Your email address will not be published. Required fields are marked *