ಕೊಪ್ಪಳ: ರೈತರ ಜಮೀನು ಸ್ವಾಧಿನ ಪಡಿಸಿಕೊಂಡು ಪರಿಹಾರ ನೀಡದ ಸಣ್ಣ ನೀರಾವರಿ ಇಲಾಖೆ ವಿರುದ್ಧ ಗರಂ ಆದ ನ್ಯಾಯಾಲಯ ಕಚೇರಿ ಪೀಠೋಪಕರಣ ಜಪ್ತಿಗೆ ಸೂಚಿಸಿದ ಕಾರಣ ಗುರುವಾರ ಅಧಿಕಾರಿಗಳು ಸಾಮಗ್ರಿಗಳನ್ನು ಕೊಂಡೊಯ್ದರು.
ಕುಕನೂರು ತಾಲೂಕಿನ ಡಿ.ಬಾಲಾಪುರ ಗ್ರಾಮದಲ್ಲಿ ಜಿನುಗು ಕೆರೆ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ 2012ರಲ್ಲಿ 14 ರೈತರಿಂದ 26.5 ಎಕರೆ ಭೂಮಿ ಸ್ವಾಧಿನ ಮಾಡಿಕೊಂಡಿದೆ. ಆಗ ಎಕರೆಗೆ 46 ಸಾವಿರ ರೂ.ನಂತೆ ಪರಿಹಾರ ವಿತರಿಸಿದೆ. ಪರಿಹಾರ ಮೊತ್ತ ಕಡಿಮೆ ಆದ ಹಿನ್ನೆಲೆಯಲ್ಲಿ ಇಲಾಖೆ ನಡೆ ಪ್ರಶ್ನಿಸಿ ರೈತರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.
2022ರಲ್ಲಿ ಎಕರೆಗೆ 3.5 ಲಕ್ಷ ರೂ. ಪರಿಹಾರ ಒದಗಿಸಲು ನ್ಯಾಯಾಲಯ ಸೂಚಿಸಿದೆ. ಈವರೆಗೂ ಪಾವತಿಸದ ಕಾರಣ ಕಚೇರಿ ಸಾಮಗ್ರಿ ಜಪ್ತಿ ಮಾಡುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಈ ಬೆನ್ನಲ್ಲೇ ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿರುವ ಸಣ್ಣ ನೀರಾವರಿ ಕಚೇರಿಗೆ ಆಗಮಿಸಿದ ಅಧಿಕಾರಿಗಳು ಮೂರು ಲಾರಿಗಳಲ್ಲಿ ಪೀಠೋಪಕರಣಗಳನ್ನು ಕೊಂಡೊಯ್ದರು.