ಡಿಸಿ ವರ್ಗಕ್ಕೆ ಮುಂದಾದರೆ ಹೋರಾಟ

ಕೊಪ್ಪಳ: ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ವರ್ಗಾವಣೆಗೆ ಕೆಲ ಜನಪ್ರತಿನಿಧಿಗಳು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಸುನಿಲ್ ಕುಮಾರ್ ಕಳೆದ ಆಗಸ್ಟ್‌ನಲ್ಲಿ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಂದಿನಿಂದ ಈವರೆಗೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಯಾವೊಬ್ಬ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯುತ್ತಿಲ್ಲ. ಆದರೆ, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಗೋವಿಂದ ಕಾರಜೋಳ, ಸುನಿಲ್ ಕುಮಾರ್ ಬಗ್ಗೆ ಬ್ರಿಟಿಷ್ ಪಳಯುಳಕೆಯಂತಿದ್ದಾರೆ. ಅವರನ್ನು ವರ್ಗಗೊಳಿಸಬೇಕು ಎಂದು ಆಗ್ರಹಿಸಿರುವ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗಿದೆ. ಇವುಗಳಲ್ಲದೆ, ಡಿಸಿ ವರ್ಗಾವಣೆಗೆ ಸ್ಥಳೀಯ ಮರಳು ಮಾಫಿಯಾ ಪರವಾಗಿರುವ ಜನಪ್ರತಿನಿಧಿಗಳು ಎತ್ತಂಗಡಿಗೆ ಹುನ್ನಾರ ನಡೆಸಿದ್ದಾರೆ ಎನ್ನುವ ಸುದ್ದಿಯೂ ಕೇಳಿಬರುತ್ತಿದೆ. ದಕ್ಷ ಅಧಿಕಾರಿಗಳು ಕಾರ್ಯ ನಿರ್ವಹಿಸಲು ಸರ್ಕಾರ ಉತ್ತಮ ವಾತಾವರಣ ನಿರ್ಮಿಸಬೇಕು. ಒಂದು ವೇಳೆ ಡಿಸಿ ವರ್ಗಕ್ಕೆ ಮುಂದಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು. ಪದಾಧಿಕಾರಿಗಳಾದ ವಿಠ್ಠಪ್ಪ ಗೋರಂಟ್ಲಿ, ಭಾರಧ್ವಜ್, ಬಸವರಾಜ ಶೀಲವಂತರ್, ಸುಂಕಪ್ಪ ಗದಗ, ಕಾಸೀಂ ಸರ್ದಾರ್ ಸೇರಿ ಇತರರಿದ್ದರು.