ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ರೈತರು

<< ರಾಷ್ಟ್ರೀಯ ಹೆದ್ದಾರಿ ಬಂದ್ > ರೈತರ ಸಂಪೂರ್ಣ ಸಾಲಮನ್ನಾಗೆ ಒತ್ತಾಯ > ಆಗಸ್ಟ್‌ವರೆಗೆ ಸಾಲಮನ್ನಾಗೆ ಗಡುವು > 11 ನಿರ್ಣಯಗಳ ಮಂಡನೆ

ಕೊಪ್ಪಳ: ಸಂಪೂರ್ಣ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸ್ವರಾಜ್ ಇಂಡಿಯಾ ಸಂಘಟನೆಯಿಂದ ತಾಲೂಕಿನ ಹಿಟ್ನಾಳ ಬಳಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆ ಸರ್ಕಾರಕ್ಕೆ ಚುರುಕು ಮುಟ್ಟಿಸುವಲ್ಲಿ ಯಶಸ್ವಿಯಾಯಿತು.

39ನೇ ರೈತ ಹುತಾತ್ಮ ದಿನ ಆಚರಣೆ, ರೈತ ಮುಖಂಡ ದಿ.ಕೆ.ಎಸ್.ಪುಟ್ಟಣ್ಣಯ್ಯ ಮಂಡಿಸಿದ ಖಾಸಗಿ ಬಿಲ್ ಅನುಷ್ಠಾನ, ಸಾಲ ಮನ್ನಾಗೆ ಆಗ್ರಹಿಸಿದ ರೈತ ಮುಖಂಡರು ಹೆದ್ದಾರಿ ಬಂದ್‌ಗೆ ನೀಡಿದ್ದ ಕರೆಗೆ ರಾಜ್ಯಾದ್ಯಂತ ರೈತರು ಬಂದು ಪ್ರತಿಭಟನೆಗೆ ಬಲ ತುಂಬಿದರು. ಹಿಟ್ನಾಳದ ಟೋಲ್‌ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಮಂಡ್ಯ, ತುಮಕೂರು, ಹಾವೇರಿ, ರಾಯಚೂರು, ಬಳ್ಳಾರಿ ಸೇರಿ 26 ಜಿಲ್ಲೆಗಳಿಂದ ಬೆಳಗ್ಗೆಯೇ ರೈತರು ಬಂದು ಸೇರಿದರು.

ರೈತ ಗೀತೆಯೊಂದಿಗೆ ಹಸಿರು ಶಾಲು ತಿರುಗಿಸುವ ಮೂಲಕ ಕೃಷಿಕರು ಪ್ರತಿಭಟನೆಗಿಳಿದರು. ಬಾಲಕಿಯೊಬ್ಬಳು ರೈತರ ಕುರಿತು ತಾನೇ ರಚಿಸಿದ ಗೀತೆ ಹಾಡಿದ್ದು ವಿಶೇಷವಾಗಿತ್ತು. ರೈತ ಹುತಾತ್ಮ ದಿನ ಪ್ರತಿ ವರ್ಷ ಅರ್ಥಪೂರ್ಣ ಆಚರಣೆ, ತಮ್ಮ ಹೋರಾಟ ನಿರಂತರಗೊಳಿಸುವ ಒಕ್ಕೋರಲಿನ ಅಭಿಪ್ರಾಯ ಮಂಡಿಸಿದರು. ರಸ್ತೆಯಲ್ಲಿ ಮಲಗುವ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ದೂರದ ಜಿಲ್ಲೆಗಳಿಂದ ಬಂದ ರೈತರಿಗೆ ಹೆದ್ದಾರಿ ಪಕ್ಕದಲ್ಲೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿಭಟನೆಯಲ್ಲಿ ರೈತರ ಪತ್ನಿಯರು, ಕೆಲ ಮಕ್ಕಳು ಪಾಲ್ಗೊಂಡಿದ್ದು ಮತ್ತೊಂದು ವಿಶೇಷ. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪೊಲೀಸರು ಮುಂಜಾಗ್ರತ ಕ್ರಮವಾಗಿ ಹೆದ್ದಾರಿಯಲ್ಲಿ ಬರುವ ವಾಹನಗಳಿಗೆ ಬೇರೆ ರಸ್ತೆ ಮೂಲಕ ತೆರಳಲು ಸೂಚಿಸಿದ್ದರಿಂದ ಟ್ರಾಫಿಕ್ ಸಮಸ್ಯೆಯಾಗಲಿಲ್ಲ.

11 ಪ್ರಮುಖ ನಿರ್ಣಯ ಅಂಗೀಕಾರ: ಪ್ರತಿಭಟನೆಯಲ್ಲಿ 11 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ರೈತರ ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ, ಆ.15ರ ಸ್ವಾತಂತ್ರೃ ದಿನದಂದು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಆಚರಣೆ. ಇತರೆ ಉದ್ದೇಶಗಳಿಗೆ ರೈತರು ಪಡೆದ ಸಾಲಮನ್ನಾ ಮಾಡದಿದ್ದರೆ, 37 ಜೆಡಿಎಸ್ ಶಾಸಕರ ಮನೆ ಮುಂದೆ ಸೆಪ್ಟಂಬರ್‌ನಲ್ಲಿ ಪ್ರತಿಭಟನೆ. ಸರಳ ಸಾಲ ನೀತಿ ರೂಪಿಸಬೇಕು. ಕೇಂದ್ರ-ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ 65:35ರಂತೆ ವಿಶೇಷ ಪ್ಯಾಕೇಜ್ ನೀಡಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿ. ರಾಷ್ಟ್ರೀಯ ಜಲನೀತಿ ರಚನೆ. ರೈತರ ಆದಾಯ ಹೆಚ್ಚಿಸಬೇಕು. ಉಕ ನೀರಾವರಿ ಯೋಜನೆಗೆ ಅನುದಾನ ನೀಡಿ, ತುಂಗಭದ್ರಾ ಎಡದಂಡೆ ನಾಲೆ ನೀರು ಸಮರ್ಪಕ ನಿರ್ವಹಣೆ ಮಾಡಬೇಕು. ಇಸ್ರೇಲ್ ಮಾದರಿ ಕೃಷಿ ಕೈ ಬಿಟ್ಟು, ಶೂನ್ಯ ಬಂಡಾವಳ ಕೃಷಿ ಜಾರಿ. 1ನೇ ತರಗತಿಯಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ವಿರೋಧ. ಬೆಂಬಲ ಬೆಲೆಗಾಗಿ ಶಾಸನ ರೂಪಿಸಬೇಕೆಂದು ಒತ್ತಾಯಿಸಲಾಯಿತು.

ಹೋರಾಟ ನಿರಂತರ: ಪ್ರತಿಭಟನೆ ಉದ್ದೇಶಿಸಿ ರೈತ ಮುಖಂಡರಾದ ಚಾಮರಸ ಮಾಲಿ ಪಾಟೀಲ್, ಜೆ.ಎಂ.ವೀರಸಂಗಯ್ಯ, ಕೆ.ಟಿ.ಗಂಗಾಧರ, ಶಾಂತಸ್ವಾಮಿ ಸೇರಿ ಅನೇಕರು ಮಾತನಾಡಿದರು. ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸಿಎಂ ತಮ್ಮ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ಬೆಂಬಲ ಬೆಲೆ ಶಾಸನ ರೂಪಿಸಬೇಕು. ಹುತಾತ್ಮ ರೈತರ ದಿನಾಚರಣೆ, ರೈತ ಚಳವಳಿ ಹೋರಟ ನಿರಂತರ ಎಂದರು. ಮುಖಂಡರಾದ ಬಡಗಲಪುರ ನಾಗೇಂದ್ರ, ಪಿ.ದರ್ಶನ್, ಜಿ.ಟಿ.ರಾಮಸ್ವಾಮಿ, ಬಿ. ರವಿಕುಮಾರ, ಕೆ.ಪಿ.ಬೂತಯ್ಯ, ನಾಗಪ್ಪ ಉಂಡಿ ಸೇರಿ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಸಾವಿರಾರು ರೈತರರಿದ್ದರು.