- 9 ನಗರ, ಸ್ಥಳಿಯ ಸಂಸ್ಥೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು
ಕೊಪ್ಪಳ: ಕೆಲ ವರ್ಷಗಳಿಂದ ನಿಸ್ತೇಜಗೊಂಡಿದ್ದ ನಗರ, ಸ್ಥಳಿಯ ಸಂಸ್ಥೆಗಳ ಚುಕ್ಕಾಣಿ ಹಿಡಿವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಪಡಿಸಿ ಸರ್ಕಾರ ಆದೇಶಿಸಿದೆ. ಈ ಬೆನ್ನಲ್ಲೇ ಸ್ಥಳಿಯ ರಾಜಕೀಯ ಚುರುಕುಗೊಂಡಿದ್ದು, ಮೀಸಲು ಪಟ್ಟಿ ಅನ್ವಯ ಯಾರಿಗೆ ಅದೃಷ್ಟವೆಂಬ ಚರ್ಚೆ ಗರಿಗೆದರಿವೆ.
ಜಿಲ್ಲಾ ಕೇಂದ್ರ ಕೊಪ್ಪಳ ನಗರಸಭೆ ಕಾಂಗ್ರೆಸ್ ಹಿಡಿತದಲ್ಲಿ ಮುಂದುವರೆದಿದೆ. ಕಳೆದ ಅವಧಿಯಲ್ಲೂ ಇಬ್ಬರು ಸದಸ್ಯರಿಗೆ ಅಧಿಕಾರ ಹಂಚಿಕೆ ಮಾಡಿ ಆಡಳಿತ ನಡೆಸಿದೆ. ಸದ್ಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಇದರಿಂದ ನಿಗದಿತ ಮೀಸಲು ಬರಲಿದೆ ಎಂದು ಕಾದು ಕುಳಿತವರಿಗೆ ಒಂದೆಡೆ ನಿರಾಸೆ ಮೂಡಿಸಿದೆ. ಮತ್ತೊಂದೆಡೆ ಸಾಮಾನ್ಯ ವರ್ಗ ಇರುವ ಕಾರಣ ಯಾರಾದರೂ ಅಧ್ಯಕ್ಷ ಗದ್ದುಗೆ ಏರಲು ಅವಕಾಶವಿದ್ದು, ಪೈಪೋಟಿ ಶುರುವಾಗಿದೆ.
31 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ 11ನೇವಾರ್ಡ್ನ ರಾಜಶೇಖರ ಆಡೂರು ಹಾಗೂ 8ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಸುನಿತಾ ಗಾಳಿ ರಾಜೀನಾಮೆ ನೀಡಿದ್ದಾರೆ. 29 ಸ್ಥಾನಕ್ಕೆ ಸದಸ್ಯರ ಬಲ ಕುಸಿದಿದೆ. ಸದ್ಯ 14 ಕಾಂಗ್ರೆಸ್, 9 ಬಿಜೆಪಿ, 2 ಜೆಡಿಎಸ್ ಹಾಗೂ ನಾಲ್ವರು ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರರು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದಾರೆ. ಜತೆಗೆ ಶಾಸಕ, ಸಂಸದರು ಕಾಂಗ್ರೆಸ್ನವರೇ ಆಗಿದ್ದು, ಹೀಗಾಗಿ ಕಾಂಗ್ರೆಸ್ಗೆ ಯಾವುದೇ ಆತಂಕವಿಲ್ಲ. ಆದರೆ, ಯಾರನ್ನು ಶಾಸಕ ಹಿಟ್ನಾಳ ನಗರ ನಾಯಕನನ್ನಾಗಿ ಮಾಡುತ್ತಾರೆಂಬ ಕುತೂಹಲ ಮೂಡಿದೆ.
ಒಂದೆಡೆ ಈಗಾಗಲೇ ಅಧ್ಯಕ್ಷ ಸ್ಥಾನ ಅಲಂಕರಿಸಿದವರು ತಮ್ಮ ಅಧಿಕಾರದಲ್ಲಿ ಅಧಿಕಾರಿಗಳು, ಶಾಸಕರ ಹಸ್ತಕ್ಷೇಪದಿಂದ ಬೇಸತ್ತಿದ್ದಾರೆ. ಸದ್ಯ 10ನೇ ವಾರ್ಡ್ನ ಮಹೇಂದ್ರ ಚೋಪ್ರಾ, 3ನೆ ವಾರ್ಡ್ನ ಅಮ್ಜದ್ ಪಟೇಲ್, ಪಕ್ಷೇತರರಾಗಿ ಗೆದ್ದರೂ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿರುವ 25ನೇ ವಾರ್ಡ್ನ ಅರುಣ್ ಅಪು$್ಪಶೆಟ್ಟಿ, 7ನೇ ವಾರ್ಡ್ನ ಅಜೀಮುದ್ದೀನ್ ಅತ್ತಾರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಅಷ್ಟೊಂದು ಪೈಪೋಟಿ ಇಲ್ಲ.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮೇಲೂ ಶಾಸಕರ ಬೆಂಬಲಿಗರು ಕಣ್ಣಿಟ್ಟಿದ್ದು, ಪ್ರಮುಖ ಸಮುದಾಯಗಳ ನಾಯಕರಿಗೆ ನಗರಸಭೆ ಹಾಗೂ ಪ್ರಾಧಿಕಾರದಲ್ಲಿ ಅಧಿಕಾರ ನೀಡಿ ಯಾವುದೇ ಬಂಡಾಯ ಸೃಷ್ಟಿಯಾಗದಂತೆ ನೋಡಿಕೊಳ್ಳಲು ಶಾಸಕ ಹಿಟ್ನಾಳ ತಂತ್ರ ಹೆಣೆಯುತ್ತಿದ್ದಾರೆನ್ನಲಾಗಿದೆ.