ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ: ಶ್ರೀರಾಮುಲು

ಕೊಪ್ಪಳ: ಶ್ರೀರಾಮುಲು ಎಂಬ ವ್ಯಕ್ತಿ ಬಿಜೆಪಿಯಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದಾನೆ. ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೊಂಡಿದ್ದಾರೆ.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀರಾಮುಲು ನನ್ನನ್ನು ಹಾಗೂ ಜನಾರ್ದನರೆಡ್ಡಿ ಅವರನ್ನು ಕಾಂಗ್ರೆಸ್ ನವರು ಸಂಪರ್ಕ ಮಾಡಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಬಿಜೆಪಿಯಲ್ಲಿ ನಾನು ಪ್ರಮುಖ ನಾಯಕನಾಗಿ ಬೆಳೆದಿದ್ದೇನೆ. ಇಂಥ ಸುಳ್ಳು ಸುದ್ದಿ ಹರಡಿಸಿ, ಯಾರೂ ಕೂಡ ನನ್ನ ತೇಜೋವಧೆ ಮಾಡುವ ಕೆಲಸ ಮಾಡಬಾರದು ಎಂದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನದಲ್ಲಿ ಸರ್ಕಾರದ ಕೈವಾಡವಿದೆ. ದೋಸ್ತಿ ಸರ್ಕಾರ ಉದ್ದೇಶಪೂರಕವಾಗಿ ಜನಾರ್ದನ ರೆಡ್ಡಿ ಬಂಧಿಸಿದೆ. ಸಿಎಂ ಕುಮಾರಸ್ವಾಮಿ ರಾಜಕೀಯ ರಿವೇಂಜ್ ತೀರಿಸಿಕೊಳ್ಳುತ್ತಿದ್ದಾರೆ. ಜನಾರ್ದನ ರೆಡ್ಡಿ ಬಂಧನದ ವಿಷಯದಲ್ಲಿ ಬಿಜೆಪಿ ಸ್ಪಂದಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​​ವೈ, ಮಾಜಿ ಸಿಎಂ ಶೆಟ್ಟರ್ ಮಾತಾಡಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.

ಇದೇ ಸಂದರ್ಭದಲ್ಲಿ ನಾಯಕ ಸಮುದಾಯಕ್ಕೆ ಶೇ. 7.5 ರಷ್ಟು ಮೀಸಲಾತಿ ಬೇಕಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಮೀಸಲಾತಿ ಜಾರಿ ಮಾಡುತ್ತೇನೆ. ರಾಜಕಾರಣ ಒಂದೆಡೆ ಇಟ್ಟು ಸಮಾಜ ಒಗ್ಗೂಡಿಸಲು ಶ್ರಮಿಸುತ್ತೇನೆ ಎಂದು ಶ್ರೀರಾಮುಲು ಭರವಸೆ ನೀಡಿದರು.