ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅಜ್ಜನ ರಥ ಸಂಪನ್ನ

ಕೊಪ್ಪಳ:ಲಕ್ಷಾಂತರ ಭಕ್ತರ ಆರಾಧ್ಯ ದೈವ, ದಕ್ಷಿಣ ಕುಂಭ ಖ್ಯಾತಿಯ ಗವಿಸಿದ್ದೇಶ್ವರ ಸ್ವಾಮಿ ರಥೋತ್ಸವವು ಮಂಗಳವಾರ ಸಂಭ್ರಮದಿಂದ ನೆರವೇರಿತು.ಕೆನಡಾದ ಮ್ಯಾಥ್ಯೂ ಫೌರ್ಟಿಯರ್ ಹಾಗೂ ಅಗ್ಯಾಥ್‌ಮೆಹ್ಸ್ ದಂಪತಿ ಧ್ವಜಾರೋಹಣ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಕತೃ ಗದ್ದುಗೆಯಿಂದ ಗವಿಸಿದ್ದೇಶ್ವರರ ಮೂರ್ತಿಯನ್ನು ಮೆರವಣಿಗೆ ಮೂಲಕ ರಥದ ಬಳಿ ತರಲಾಯಿತು. ಗಣ್ಯರು ಚಾಲನೆ ನೀಡುತ್ತಿಲೆ, ನೆರೆದಿದ್ದ 6 ಲಕ್ಷಕ್ಕೂ ಅಧಿಕ ಭಕ್ತರು ಉಘೆ, ಉಘೆ ಗವಿಸಿದ್ಧ ಎಂಬ ನಾಮಸ್ಮರಣೆ ಮಾಡಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಮೆರೆದರು.

ಸಂತಸವಾಗುತ್ತಿದೆ ಭಕ್ತವೃಂದ ಕಂಡು
ಈ ಬಾರಿಯ ರಥೋತ್ಸವದ ಮುಖ್ಯ ಅತಿಥಿ ಮ್ಯಾಥ್ಯೂ ಫೌರ್ಟಿಯರ್ ರಥೋತ್ಸವಕ್ಕೆ ಚಾಲನೆ ನೀಡಿ, ಲಕ್ಷಾಂತರ ಭಕ್ತ ವೃಂದವನ್ನು ಕಂಡು ಸಂತಸವಾಗುತ್ತಿದೆ ಎಂದು ಕನ್ನಡದಲ್ಲೇ ಮಾತು ಆರಂಭಿಸಿದರು. ಶ್ರೀಗವಿಸಿದ್ದೇಶ್ವರರಿಗೆ ನಮಸ್ಕಾರಗಳು. ಗವಿಸಿದ್ದೇಶ ನಿಮಗೆಲ್ಲ ಆಯುಷ್ಯ, ಆರೋಗ್ಯ, ಸಂಪತ್ತು ಕೊಟ್ಟು ಕಾಪಾಡಲಿ. ದಕ್ಷಿಣದ ಕುಂಭಮೇಳ ಎಂದು ಕೇಳಿದ್ದೆ. ಇಂದು ನೆರೆದ ಜನರನ್ನು ಕಂಡು ಖಾತ್ರಿಯಾಯಿತು. ಎಲ್ಲರೂ ಶ್ರೀಗಳ ಸೇವೆ ಮಾಡಿ ಕೃತಾರ್ಥರಾಗೊಣ ಎಂದರು. ಅವರ ಈ ಮಾತುಗಳು ಕೇಳುತ್ತಲೇ ಭಕ್ತವೃಂದ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿತು.

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಜಾತ್ರೆಗೆ ಚಾಲನೆ ನೀಡಲು ಈ ವರ್ಷ ಕೆನಡಾದವರು ಆಗಮಿಸಿದ್ದಾರೆ. ಎಲ್ಲಿಯ ಕೆನಡಾ, ಎಲ್ಲಿಯ ಕನ್ನಡ.. ಅವರನ್ನು ಮುಖ್ಯ ಅತಿಥಿಯನ್ನಾಗಿಸಲು ಕಾರಣವಿದೆ. ಅವರು ಪ್ರವಾಸಿಗರಾಗಿ ಭಾರತಕ್ಕೆ ಬಂದವರು. ಇಲ್ಲಿನ ಸಂಸ್ಕೃತಿಗೆ ಮನಸೋತು ಸಂಗೀತ ಕಲಿತರು. ದೇಶದ ಹಲವೆಡೆ ಸುತ್ತಿದರು. ಕೊನೆಗೆ ಧಾರವಾಡದಲ್ಲಿ 300ಕ್ಕೂ ಅಧಿಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಸಂಗೀತ ಕಲಿಸುತ್ತಿದ್ದಾರೆ. ಕೆನಡಾದಲ್ಲಿ ದುಡಿದು ಕನ್ನಡದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ನಮ್ಮೂರಲ್ಲಿ ನಾವಿದ್ದು, ನಮ್ಮವರಿಗೆ ಏನು ಮಾಡಲಾಗಿಲ್ಲ.ಆದರೆ, ಅವರು ಎಲ್ಲೆಂದಿಲೋ ಬಂದು ಇಷ್ಟೆಲ್ಲ ಮಾಡುತ್ತಿದ್ದು, ನಮಗೆ ಮಾದರಿಯಾಗಿದ್ದಾರೆ ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಬಯ್ಯಪೂರ, ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ್, ಬಸವರಾಜ ದಢೇಸುಗೂರು, ಪ್ರತಾಪಗೌಡ ಪಾಟೀಲ್, ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ, ಡಿಸಿ ಪಿ.ಸುನಿಲ್ ಕುಮಾರ್, ಎಸ್ಪಿ ರೇಣುಕಾ ಸುಕುಮಾರ ಸೇರಿ ಇತರೆ ಗಣ್ಯರಿದ್ದರು.

ಸಿದ್ಧಗಂಗಾ ಶ್ರೀಗಳಿಗೆ ನುಡಿನಮನ
ರಥೋತ್ಸವಕ್ಕೂ ಮುನ್ನ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ನುಡಿನಮನ ಸಲ್ಲಿಸಲಾಯಿತು. ಗವಿಶ್ರೀಗಳು ಮಾತನಾಡಿ, ನಡೆದಾಡುವ ದೇವರು ನಮ್ಮನ್ನು ಅಗಲಿದ್ದಾರೆ. ಭೌತಿಕವಾಗಿ ಅವರಿಲ್ಲದಿದ್ದರೂ, ಅವರ ಉಸಿರು ನಮ್ಮೆಲ್ಲರಲ್ಲಿ ಬೆರೆತಿದೆ. 111 ವರ್ಷ ಬದುಕಿ ಲಕ್ಷಾಂತರ ಜನರಿಗೆ ಅನ್ನ,ಅರಿವು ಕೊಟ್ಟವರು. ಅವರು ಮತ್ತೊಮ್ಮೆ ಹುಟ್ಟಿ ಬರಲಿ. ಎಂದರು. ಗವಿಮಠದ ಆವರಣದಲ್ಲಿ ನೆರೆದಿದ್ದ ಲಕ್ಷಾಂತರ ಜನರು ಅರೆಕ್ಷಣ ಸ್ತಬ್ಧರಾಗಿ ಮೌನಾಚರಣೆ ಮಾಡಿದರು.

ಅಜ್ಜನ ಜಾತ್ರೆ ಕಂಡು ನಿಬ್ಬೆರಗಾದ ಮ್ಯಾಥ್ಯೂ!
ಈ ಬಾರಿಯ ಗವಿಸಿದ್ದೇಶ್ವರ ಜಾತ್ರೆಗೆ ವಿಶೇಷ ಅತಿಥಿಯಾಗಿ ಆಗಮಿಸಿರುವ ಕೆನಡಾದ ಮ್ಯಾಥ್ಯೂ ಫೌರ್ಟಿಯರ್ ಅಜ್ಜನ ಜಾತ್ರೆ ವೈಭವ ಕಂಡು ನಿಬ್ಬೆರಗಾದರು.

ಮ್ಯಾಥ್ಯೂ ಹಾಗೂ ಅಗ್ಯಾಥ್ ಮೆಹ್ಸ್ ದಂಪತಿ ಮತ್ತು ಮಕ್ಕಳು ರಥೋತ್ಸವಕ್ಕೂ ಮುನ್ನ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು. ಗವಿಸಿದ್ದೇಶ್ವರನ ಗದ್ದುಗೆ ದರ್ಶನದ ನಂತರ ದಾಸೋಹ ಮಂಟಪ ಸೇರಿ ಇತರೆಡೆ ಓಡಾಡಿ ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು. ಶ್ರೀಗಳೊಂದಿಗೆ ಕುಶಲೋಪರಿ ವಿಚಾರಿಸಿದರು. ದೊಡ್ಡ ಜಾತ್ರೆಯ ಆಯೋಜನೆ ಬಗ್ಗೆ ಮಾಹಿತಿ ಪಡೆದರು.

ದಾಸೋಹ ಮಂಟಪಕ್ಕೆ ಬಂದ ಮ್ಯಾಥ್ಯೂ ದಂಪತಿ ಇಷ್ಟೊಂದು ಜನ, ಎಷ್ಟೊಂದು ದೊಡ್ಡ ಪ್ರಮಾಣದ ಅಡುಗೆ? ಎಂದು ಆಶ್ಚರ್ಯ ಚಕಿತ ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಸಾಂಬಾರಿಗೆ ಉಟ್ಟು ಹಾಕಿದರು. ಮಾದಲಿ, ಉದುರು ಸಜ್ಜಕದ ಸವಿ ಸವಿದರು. ನಂತರ ದಾಸೋಹಕ್ಕೆ ಆಗಮಿಸಿದ ಭಕ್ತರಿಗೆ ಸ್ವತಃ ಉಣಬಡಿಸಿದರು.

ಇಟ್ಸ್ ಆ್ಯನ್ ಅಮೇಜಿಂಗ್ ಎಕ್ಸ್‌ಪಿರಿಯನ್ಸ್… ಇದೊಂದು ಅದ್ಭುತ ಅನುಭವ. ನಾನು ಹಲವು ಜಾತ್ರೆಗಳನ್ನು ಕಂಡಿದ್ದೇನೆ. ಆದರೆ, ಇಷ್ಟೊಂದು ವೈಭವ ಕಂಡಿಲ್ಲ. ತುಂಬಾ ಖುಷಿಯಾಗುತ್ತಿದೆ.
|ಮ್ಯಾಥ್ಯೂ ಫೌರ್ಟಿಯರ್ ಜಾತ್ರೋತ್ಸವದ ಮುಖ್ಯ ಅತಿಥಿ

ಇಂಥಹ ಜನಸ್ತೋಮ ಎಲ್ಲಿಯೂ ಕಂಡಿಲ್ಲ. ಲಕ್ಷಾಂತರ ಜನರನ್ನು ಕಂಡು ಮಾತೇ ಬರುತ್ತಿಲ್ಲ. ಮನು ಮತ ಒಂದೇ ಎಂದು ಗವಿಮಠ ಸಾಬೀತು ಮಾಡಿದೆ. ಇದಕ್ಕೆ ಇಲ್ಲಿ ನೆರೆದ ಭಕ್ತರು, ರಥೋತ್ಸವ ಸಾಕ್ಷಿ
|ಕ್ಯಾಪ್ಟನ್ ಗೋಪಿನಾಥ.