ಏಡ್ಸ್ ಜಾಗೃತಿ ಕುರಿತ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ

ಕೊಪ್ಪಳ: ಏಡ್ಸ್ ಜಾಗೃತಿ ಆಂದೋಲನಾ ಪ್ರಯುಕ್ತ ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಶುಕ್ರವಾರ ನಡೆಸಲಾಯಿತು.

ಕಾರ್ಯಕ್ರಮದಲ್ಲಿ 14 ಕಾಲೇಜುಗಳು ಭಾಗವಹಿಸಿದ್ದು, ಪ್ರತಿ ಕಾಲೇಜಿನಿಂದ ಇಬ್ಬರಂತೆ 28 ವಿದ್ಯಾರ್ಥಿಗಳು ಭಾಗವಹಿಸಿದ್ದರು. 14 ತಂಡ ರಚಿಸಿ 3 ಸುತ್ತಿನ ಪ್ರಶ್ನೆ ಕೇಳಲಾಯಿತು. ಹೆಚ್ಚು ಅಂಕ ಪಡೆದ 8 ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. 4 ಸುತ್ತಿನ ಪ್ರಶ್ನೆಗಳನ್ನು ಕೇಳಿದ ಬಳಿಕ ಅತಿ ಹೆಚ್ಚು ಅಂಕ ಪಡೆದ 4 ತಂಡಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ವಿತರಿಸಲಾಯಿತು.

ಗಂಗಾವತಿಯ ಟಿ.ಎಂ.ಎ.ಇ.ಎಸ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದಿದ್ದು, 1,000ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಪಡೆಯಿತು. ಯಲಬುರ್ಗಾದ ಸ.ಪ್ರ.ದ.ಕಾಲೇಜು ದ್ವಿತೀಯ ಸ್ಥಾನ ಪಡೆದು (750ರೂ.), ಗಂಗಾವತಿಯ ಎಸ್.ಕೆ.ಎನ್.ಜಿ. ಕಾಲೇಜು ತೃತೀಯ ಸ್ಥಾನ, (500 ರೂ.), ಮಂಗಳೂರಿನ ಸ.ಪ್ರ.ದ.ಕಾಲೇಜು ನಾಲ್ಕನೇ ಸ್ಥಾನ ಪಡೆದು ಸಮಾಧಾನಕರ ಬಹುಮಾನ ಪಡೆಯಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಜಂಬಯ್ಯ ಚಾಲನೆ ನೀಡಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮಹೇಶ್ ಎಂ.ಜಿ., ಟಿಎಚ್‌ಒ ಡಾ.ರಾಮಾಂಜನೇಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಡ್ಯಾಪ್ಕೋ ಜಿಲ್ಲಾ ಮೇಲ್ವಿಚಾರಕ ಮಾಲತೇಶ ಸಜ್ಜನ್, ಆಪ್ತ ಸಮಾಲೋಚಕ ಚಿದಾನಂದ ಇಂಡಿ ಸೇರಿ ವಿವಿಧ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು.

Leave a Reply

Your email address will not be published. Required fields are marked *