ಕೊಪ್ಪಳ: ಕೃಷಿ ಇಲಾಖೆಯಿಂದ ಹಮ್ಮಿಕೊಂಡಿರುವ ಕೃಷಿ ಹಾಗೂ ಜಲಾಮೃತ ಅಭಿಯಾನಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಹಸಿರು ನಿಶಾನೆ ತೊರಿಸುವ ಮೂಲಕ ಸೋಮವಾರ ಚಾಲನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ಶಬಾನಾ ಮಾತನಾಡಿ, ಅಭಿಯಾನದಲ್ಲಿ ಕೃಷಿ ಇಲಾಖೆಯಿಂದ ಜಾರಿಯಾಗಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಸಂಚಾರಿ ಕೃಷಿ ಮಾಹಿತಿ ವಾಹನಗಳ ಮೂಲಕ ಸಾರ್ವಜನಿಕರಿಗೆ ಮುಟ್ಟಿಸಲಾಗುತ್ತಿದೆ. ವಿಶೇಷವಾಗಿ ರೈತರಿಗೆ ಸಮಗ್ರ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೇ 20ರಿಂದ ಜಿಲ್ಲಾದ್ಯಂತ ನಡೆಯಲಿದೆ. ಇದಕ್ಕೆ ಕೃಷಿ ಅಭಿಯಾನ ಹಾಗೂ ಜಲಾಮೃತ ಅಭಿಯಾನ ಎಂದು ಹೆಸರಿಸಿದ್ದು, ಜಿಲ್ಲೆಯ ಎಲ್ಲ ಹೋಬಳಿ ಹಾಗೂ ಎಲ್ಲ ಗ್ರಾಪಂ ಮಟ್ಟದಲ್ಲಿ ವಾಹನಗಳು ಸಂಚರಿಸಲಿವೆ. ಇಲಾಖೆಯಿಂದ ನೀಡುವ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದು, ಸೌಲಭ್ಯ ಪಡೆಯುವ ಬಗೆಯನ್ನು ವಿವರಿಸಲಾಗುವುದು. ಎಲ್ಲ ರೈತರು ಯೋಜನೆಗಳ ಮಾಹಿತಿ ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ್, ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇತರರಿದ್ದರು.