ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಕೊಪ್ಪ: ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವ ಶುಕ್ರವಾರ ಧಾರ್ವಿುಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಅಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಹುಚ್ಚೂರಾಯರ ಕೆರೆಯವರೆಗೆ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿ ಪವಿತ್ರಜಲವನ್ನು ದೇವಸ್ಥಾನಕ್ಕೆ ತರಲಾಯಿತು. ನಂತರ ದೇಗುಲದ ಆವರಣದಲ್ಲಿ ಆಯೋಜಿಸಿದ್ದ ಕೆಂಡಸೇವೆಯಲ್ಲಿ ಮೊದಲು ಶ್ರೀದೇವರ ಹೊತ್ತ ಅರ್ಚಕರು ಕೆಂಡಹಾಯ್ದರು. ನಂತರ ಭಕ್ತಾದಿಗಳು ಸರತಿ ಸಾಲಿನಲ್ಲಿ ಕೆಂಡ ಹಾಯ್ದರು.

ಮಧ್ಯಾಹ್ನ 1ಗಂಟೆಗೆ ಉತ್ಸವ ಮೂರ್ತಿಯನ್ನು ರಥದ ಬಳಿ ತರಲಾಯಿತು. ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ದೇವರ ಮನ್ಮಹಾರಥಾರೋಹಣ ನೆರವೇರಿತು. ಸಹಸ್ರಾರು ಭಕ್ತರು ಶ್ರೀ ವೀರಭಧ್ರಸ್ವಾಮಿಗೆ ಜಯಘೊಷ ಕೂಗುತ್ತ ರಥಕ್ಕೆ ಬಾಳೆಹಣ್ಣು, ಅಕ್ಷತೆ, ದವಸ ಧಾನ್ಯಗಳನ್ನು ಎರಚಿದರು. ದೇವರಿಗೆ ಹಣ್ಣುಕಾಯಿ, ಮಹಾ ಮಂಗಳಾರತಿ ನೆರವೇರಿಸಿದ ನಂತರ ದೇವಸ್ಥಾನದಿಂದ ಚಿಕ್ಕಮಗಳೂರು ವೃತ್ತದವರೆಗೆ ರಥ ಎಳೆದುಕೊಂಡು ಬರಲಾಯಿತು. ರಾತ್ರಿ ರಥೋತ್ಸವದಲ್ಲಿ ಮೇಲಿನಪೇಟೆಯ ಗಡಿಕಟ್ಟೆವರೆಗೆ ರಥ ಎಳೆದುಕೊಂಡು ಹೋಗಿ ವಾಪಸ್ ದೇವಸ್ಥಾನಕ್ಕೆ ಬರಲಾಯಿತು.

ರಥಸಾಗಿ ಬಂದ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ರಸ್ತೆಯನ್ನು ರಂಗೋಲಿಯಿಂದ ಅಲಂಕರಿಸಲಾಗಿತ್ತು. ತಳಿರು ತೋರಣಗಳನ್ನು ಕಟ್ಟಲಾಗಿತ್ತು. ನಾಸಿಕ್​ಡೋಲು, ಚೆಂಡೆಮೇಳ, ವೀರಗಾಸೆ, ಮಂಗಳವಾದ್ಯ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿದ್ದವು. ದೇವಸ್ಥಾನ ಹಾಗೂ ಸುತ್ತಲಿನ ಆವರಣವನ್ನು ಹೂ, ವಿದ್ಯುದೀಪಗಳಿಂದ ಅಲಂಕರಿಸಲಾಗಿತ್ತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

Leave a Reply

Your email address will not be published. Required fields are marked *