
ಕೊಪ್ಪ: ಖಾಸಗಿ ಲೇಔಟ್ ನಿರ್ಮಾಣದಿಂದ ಹುಚ್ಚುರಾಯರ ಕರೆ ಕಲುಷಿತಗೊಳ್ಳುತ್ತಿದ್ದು, ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳದ ಕಾರಣ ಪಟ್ಟಣ ಪಂಚಾಯಿತಿ ಹೈಕೋರ್ಟ್ ಕದ ತಟ್ಟಲು ಮುಂದಾಗಿದೆ.
ಕೊಪ್ಪ ಪಟ್ಟಣಕ್ಕೆ ನೀರು ಪೂರೈಸುವ ಏಕೈಕ ಕೆರೆ ನೀರು ಕಲುಷಿತಗೊಳ್ಳಲು ಅವಕಾಶ ನೀಡಿದರೆ ಮುಂದಿನ ದಿನದಲ್ಲಿ ಪಟ್ಟಣದ ಜನತೆಗೆ ಸಮಸ್ಯೆಯಾಗಲಿದೆ ಆದ್ದರಿಂದ ಖಾಸಗಿ ಲೇಔಟ್ ನಿರ್ಮಾಣದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಪಪಂನಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜೂನ್ 5ರಂದು ನಡೆದ ತುರ್ತು ಸಭೆಯಲ್ಲಿ ಹುಚ್ಚುರಾಯಕೆರೆ ಹಾಗೂ ಖಾಸಗಿ ಲೇಔಟ್ ನಿರ್ಮಾಣದ ಕುರಿತು ಚರ್ಚೆಗೊಳ್ಳಲು ಕಾಂಗ್ರೆಸ್ ಸದಸ್ಯರು ಮತ್ತು ನಾಮ ನಿರ್ದೇಶಿತ ಸದಸ್ಯರು ಅವಕಾಶ ನೀಡಿರಲಿಲ್ಲ. ಹಾಗಾಗಿ ಸೋಮವಾರ ಈ ಕುರಿತು ವಿಷಯ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿಯೂ ಸಹ ಕಾಂಗ್ರೆಸ್ ಸದಸ್ಯರು ನ್ಯಾಯಾಲಯಕ್ಕೆ ಹೋಗುವ ನಿರ್ಧಾರ ವಿರೋಧಿಸಿದ್ದರು, ನಂತರ ನ್ಯಾಯಾಲಯಕ್ಕೆ ದಾವೆ ಹಾಕುವ ಸಂಬಂಧ ಮತಕ್ಕೆ ಹಾಕಿದಾಗ 6 ಬಹುಮತದೊಂದಿಗೆ ನಿರ್ಣಯ ಆಂಗೀಕರವಾಯಿತು.
ನಾಮ ನಿರ್ದೇಶಿತ ಸದಸ್ಯ ಸಂದೇಶ್ ಮಾತನಾಡಿ, ಲೇಔಟ್ ಮಾಲೀಕರಿಗೆ ಮತ್ತೊಮ್ಮೆ ತಿಳುವಳಿಕೆ ಪತ್ರ ನೀಡುವುದು ಒಳ್ಳೆಯದು. ಕರೆಯ ಇತರ ಭಾಗದಿಂದಲೂ ಕಲುಷಿತ ನೀರು ಬರುವ ಬಗ್ಗೆ ಕ್ರಮ ವಹಿಸಬೇಕು ಎಂದರು. ಮುಖ್ಯಧಿಕಾರಿ ಚಂದ್ರಕಾಂತ್ ಖಾಸಗಿ ಲೇಔಟ್‌ನಿಂದ ತೊಂದರೆ ಯಾಗುವ ಬಗ್ಗೆ ವಿವಿಧ ಇಲಾಖೆಗಳಿಗೆ ಬರೆದ ಪತ್ರವನ್ನು ಸಭೆಗೆ ನೀಡಿದರು.