ಭದ್ರಾ ನದಿ ಸೇತುವೆ ಕಾಮಗಾರಿ ದಿಢೀರ್ ಆರಂಭಕ್ಕೆ ಆಕ್ಷೇಪ

ಎನ್.ಆರ್.ಪುರ: ಬಾಳೆಹೊನ್ನೂರು ಸಮೀಪದ ಬಂಡಿಮಠದ ಭದ್ರಾ ನದಿ ಸೇತುವೆ ಕಾಮಗಾರಿ ಏಕಾಏಕಿ ಪ್ರಾರಂಭಗೊಂಡಿರುವುದರಿಂದ ಅದರ ಆಸುಪಾಸಿನ ಕುಟುಂಬಗಳಿಗೆ ತೊಂದರೆಯಾಗಿದ್ದು, ಇಲ್ಲಿನ ನಿವಾಸಿಗಳಿಗೆ ಬದಲಿ ವ್ಯವಸ್ಥೆ ಮಾಡಿ ನಂತರ ಸೇತುವೆ ಕಾಮಗಾರಿ ಪ್ರಾರಂಭಿಸಿ ಎಂದು ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಈ.ಸಿ.ಜಯಶ್ರೀ ಮೋಹನ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಬನ್ನೂರು ಗ್ರಾಪಂ ಪಿಡಿಒ ಸುಜಾತಾ ಮಾತನಾಡಿ, ಈ ಬಗ್ಗೆ ಗ್ರಾಪಂಗೂ ಮಾಹಿತಿ ನೀಡಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ತಾಪಂ ಅಧ್ಯಕ್ಷೆ ಈ.ಸಿ.ಜಯಶ್ರೀ ಮೋಹನ ಮಾತನಾಡಿ, ಬಾಳೆಹೊನ್ನೂರಿನ ಚಿತ್ರಮಂದಿರದ ಜಾಗದ ವಿವಾದ ಕುರಿತು ದೂರುಗಳು ಬರುತ್ತಿವೆ. ಸರ್ಕಾರಿ ಜಾಗ ಉಳಿಸುವುದು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಕರ್ತವ್ಯ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಫಾರಂ 50,53 ಅಡಿ ಉಳ್ಳವರಿಗೂ ಜಾಗ ಮಂಜೂರು ಮಾಡಲಾಗಿದೆ. 15, 20 ಎಕರೆ ಭೂಮಿ ನೀಡಿದವರಿಂದ ಜಾಗ ಮುಟ್ಟುಗೋಲು ಹಾಕಿಕೊಂಡು ನಿವೇಶನ ಮಾಡಿ ಹಂಚಿಕೆ ಮಾಡಬಹುದು ಎಂದರು. ಭೂ ಒತ್ತುವರಿ ಮಾಡಿರುವ ಪ್ರಭಾವಿಗಳ ಪಟ್ಟಿ ನೀಡುವಂತೆ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಗ್ರಾಪಂ ನಿವೇಶನ ಹಂಚಿಕೆಗೆ ಸಲ್ಲಿಸಿರುವ ಜಾಗಕ್ಕೆ ಕೈ ಬರಹದ ಪಹಣಿ, ಮ್ಯುಟೇಷನ್ ನೀಡಬೇಕು ಎಂದು ತಿಳಿಸಿದ್ದೆ. ಆದರೆ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಹೊರತು ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು.

2008-09ರಲ್ಲಿ ಸೆಕ್ಷನ್ 4 ಮಾಡಿರುವುದರಿಂದ ಅರಣ್ಯ ಇಲಾಖೆ 1930ರ ಆದೇಶ ತಂದು ಅರಣ್ಯ ಪ್ರದೇಶ ಎನ್ನುತ್ತಿದ್ದಾರೆ. ಸೆಕ್ಷನ್ 4 ಮಾಡುವಾಗಲೇ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿ ಜಾಗ ಗುರುತಿಸಿ ಸೆಕ್ಷನ್ ಮಾಡಿದ್ದರೆ ನಿವೇಶನ ಹಂಚಿಕೆಗೆ ಈಗ ಸಮಸ್ಯೆಯಾಗುತ್ತಿರಲಿಲ್ಲ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.

ಶಿರಸ್ತೇದಾರ್ ನಾಗೇಂದ್ರ ನಾಯ್್ಕ ಮಾತನಾಡಿ, ಸೆಕ್ಷನ್(4) ಮಾಡುವಾಗ ನಿವೇಶನ ಜಾಗ, ಸೊಪ್ಪಿನ ಬೆಟ್ಟದಂತಹ ಪ್ರದೇಶ ಹಾಗೂ ಗ್ರಾಪಂ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಬೇಕಾದ ಜಾಗ ಹೊರತುಪಡಿಸಿ ಎಲ್ಲ ಜಾಗಗಳನ್ನೂ ಸೆಕ್ಷನ್(4) ಮಾಡಿದರೆ ನಿವೇಶನ ಹಂಚಿಕೆಗೆ ಜಾಗ ಎಲ್ಲಿಂದ ಸಿಗುತ್ತದೆ. ಅರಣ್ಯ ಉಳಿಸಲು ಬಡವರ ಜೀವನ ಹಾಳು ಮಾಡುವುದು ಸರಿಯಲ್ಲ ಎಂದರು.

ವೈಲ್ಡ್​ಲೈಫ್ ಭೀತಿ: ತಾಲೂಕಿನ ಹೆನ್ನಂಗಿ, ಬೆಳ್ಳಂಗಿ, ಅಳೆಹಳ್ಳಿ ಗ್ರಾಮಗಳು ವೈಲ್ಡ್​ಲೈಫ್ ಆಗುತ್ತವೆ ಎಂಬ ಬಗ್ಗೆ ಜನರಲ್ಲಿ ಗೊಂದಲ ಮೂಡಿದೆ. ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಲೋಕೇಶ್ ಮಾತನಾಡಿ, ಕೂಸ್ಗಲ್ ಮೀಸಲು ಅರಣ್ಯ ಪ್ರದೇಶಗಳು ವೈಲ್ಡ್​ಲೈಫ್​ಗೆ ಒಳಪಡುತ್ತವೆ. ಈ ಪ್ರದೇಶಕ್ಕೆ ಅಳೆಹಳ್ಳಿ, ಹೆನ್ನಂಗಿ, ಬೆಳ್ಳಂಗಿ ಗ್ರಾಮಗಳು ಬರುತ್ತವೆ. ಈ ಮೀಸಲು ಅರಣ್ಯ ಪ್ರದೇಶದ ಬಗ್ಗೆ ಮುಂದಿನ ಸಭೆಯಲ್ಲಿ ಸಮಗ್ರ ವರದಿ ನೀಡಲಾಗುವುದು ಎಂದು ಸೂಚಿಸಿದರು.

Leave a Reply

Your email address will not be published. Required fields are marked *