ಚಿಕ್ಕಮಗಳೂರು ಸರ್ಕಾರಿ ಶಾಲಾ ಮಕ್ಕಳ ಶೇ.53 ರಷ್ಟು ಪಠ್ಯಪುಸ್ತಕ ಸರಬರಾಜು

ಚಿಕ್ಕಮಗಳೂರು: ಬೇಸಿಗೆ ರಜೆ ಅವಧಿ ಮುಗಿದು ಶಾಲೆ ಮರು ಆರಂಭದ ದಿನ ಹತ್ತಿರವಾಗುತ್ತಿರುವಾಗ ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪಠ್ಯಪುಸ್ತಕ, ಸಮವಸ್ತ್ರ ಸರಬರಾಜು ವ್ಯವಸ್ಥೆ ಕಡೆ ಗಮನ ಹರಿಸಿದ್ದಾರೆ.

ಈಗಾಗಲೆ ಶೇ.53.75 ಪಠ್ಯ ಪುಸ್ತಕಗಳು ಬಿಇಒ ಕಚೇರಿ ಸುಪರ್ದಿಯಲ್ಲಿರುವ ಪುಸ್ತಕ ಉಗ್ರಾಣಗಳಿಗೆ ಬಂದಿವೆ. ಸರ್ಕಾರದ ಅಧೀನದ ಪುಠ್ಯಪುಸ್ತಕ ಸಂಘ 1-10ನೇ ತರಗತಿವರೆಗಿನ ಪಠ್ಯಪುಸ್ತಕ ಸರಬರಾಜು ಹೊಣೆ ಹೊತ್ತಿದೆ. ಶಾಲೆಗಳ ಮುಖ್ಯಶಿಕ್ಷಕರು, ನೋಡಲ್ ಅಧಿಕಾರಿಗಳ ಬೇಡಿಕೆ ಸಲ್ಲಿಸಿದಂತೆ ಪುಠ್ಯ ಪುಸ್ತಕ ಸರಬರಾಜು ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 1,497 ಸರ್ಕಾರಿ, 143 ಅನುದಾನಿತ, 293 ಅನುದಾನರಹಿತ ಹಾಗೂ ಇತರೆ 74 ಸೇರಿ ಒಟ್ಟು 2007 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಸರ್ಕಾರಿ ಶಾಲೆಯಲ್ಲಿ 70,398, ಅನುದಾನಿತ ಶಾಲೆಯಲ್ಲಿ 20,218, ಅನುದಾನ ರಹಿತ ಶಾಲೆಯಲ್ಲಿ 49,452 ಹಾಗೂ ಇತರೆ ಶಾಲೆಗಳಲ್ಲಿ 7,158 ಸೇರಿ ಒಟ್ಟು 1,47,226 ಮಕ್ಕಳು ಇದ್ದಾರೆ.

ಪ್ರತಿ ಶಾಲೆಯ ಮಕ್ಕಳ ಸಂಖ್ಯೆಯನ್ನು ಮುಖ್ಯಶಿಕ್ಷಕರು ಹಾಗೂ ನೋಡಲ್ ಅಧಿಕಾರಿಗಳು ಸ್ಯಾಟ್ಸ್ (ಖಅಖಖ) ಸಾಫ್ಟ್​ವೇರ್​ನಲ್ಲಿ ಅಪ್​ಲೋಡ್ ಮಾಡಬೇಕು. ಈ ಅಂಕಿಅಂಶ ಆಧರಿಸಿ ರಾಜ್ಯ ಸರ್ಕಾರದ ಅಧೀನದ ಪಠ್ಯಪುಸ್ತಕ ಸಂಘ ಪುಸ್ತಕಗಳನ್ನು ಬಿಇಒ ಕಚೇರಿಗೆ ಸರಬರಾಜು ಮಾಡುತ್ತದೆ.

ಸ್ಯಾಟ್ಸ್​ನಲ್ಲಿ ಮುಖ್ಯಶಿಕ್ಷಕರು, ನೋಡಲ್ ಅಧಿಕಾರಿಗಳು ತುಂಬಿದ ಅಂಕಿಅಂಶ ಪರಿಶೀಲಿಸಿ ಪಠ್ಯಪುಸ್ತಕ ಸಂಘಕ್ಕೆ ಅಂತಿಮವಾಗಿ ಡೆಲವರಿ ಚಾನಲ್(ಡಿಸಿ) ಕೊಡಬೇಕು. ಡಿಸಿ ಆಧಾರದ ಮೇಲೆ ಮಕ್ಕಳು ಮತ್ತು ವಿಷಯ ಸಂಖ್ಯೆ ಆಧರಿಸಿ ಪುಸ್ತಕಗಳ ಸರಬರಾಜು ಮಾಡಲಾಗುತ್ತದೆ. ಪ್ರತಿ ಬಿಇಒ ಅಧೀನದಲ್ಲಿ ಪುಸ್ತಕ ಉಗ್ರಾಣ ಪಾಲಕರನ್ನು ನಿಯೋಜಿಸಲಾಗಿದ್ದು, ಇವರು ಪಠ್ಯಪುಸ್ತಕ ಸಂಘ ಸರಬರಾಜು ಮಾಡಿದ ಪುಸ್ತಕಗಳನ್ನು ಸ್ವೀಕರಿಸುತ್ತಾರೆ. ನಂತರ ಶಾಲಾ ಪ್ರಾರಂಭ ಹಂತದಲ್ಲಿ ಬಿಇಒಗಳು ನೋಡಲ್ ಅಧಿಕಾರಿ ಹಾಗೂ ಮುಖ್ಯಶಿಕ್ಷಕರ ಮೂಲಕ ಶಾಲೆಗಳಿಗೆ ಪುಸ್ತಕಗಳನ್ನು ತಲುಪಿಸುತ್ತಾರೆ.

ಎರಡು ತಾಲೂಕಿಗೆ ವಿಳಂಬ: ಕೊಪ್ಪ ಮತ್ತು ಕಡೂರು ತಾಲೂಕಿನ ಬಿಇಒಗಳು ಕೆಲ ಡಿಸಿಗಳನ್ನು ಪಠ್ಯಪುಸ್ತಕ ಸಂಘಕ್ಕೆ ಇನ್ನೂ ಪೂರ್ಣವಾಗಿ ನೀಡಿಲ್ಲ. ಹೀಗಾಗಿ ಈ ಎರಡೂ ತಾಲೂಕಿಗೆ ಪಠ್ಯಪುಸ್ತಕಗಳು ತಡವಾಗಿ ಬರುವ ಸಾಧ್ಯತೆ ಇದೆ. ನೋಡಲ್ ಅಧಿಕಾರಿಗಳು ಮತ್ತು ಬಿಇಒಗಳು ರಜೆ ಮೇಲೆ ತೆರಳಿದ್ದರು. ಇದರ ಜತೆ ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದರಿಂದ ಡಿಸಿ ಕಳಿಸಲು ಸ್ವಲ್ಪ ತಡವಾಗುತ್ತಿದೆ ಎನ್ನಲಾಗಿದೆ.

ನಿಖರತೆಗೆ ಸ್ಯಾಟ್ಸ್ ಸಾಫ್ಟ್​ವೇರ್: ಪಠ್ಯ ಪುಸ್ತಕ, ಸಮವಸ್ತ್ರ, ಶೂ, ಸೈಕಲ್ ವಿತರಣೆ ಆಯಾ ಶಾಲಾ ಶಿಕ್ಷಕರು ಸ್ಯಾಟ್ಸ್​ನಲ್ಲಿ ಮಕ್ಕಳ ಸಂಖ್ಯೆ ನಮೂದು ಆಧರಿಸಿ ಸರಬರಾಜು ಮಾಡಲಾಗುತ್ತದೆ. ಸ್ಯಾಟ್ಸ್ ಸಾಫ್ಟ್​ವೇರ್ ಅಂಕಿಅಂಶವೇ ಎಲ್ಲ ರೀತಿ ಸಾಮಗ್ರಿ ಸರಬರಾಜಿಗೆ ಪ್ರಮುಖ ಆಧಾರವಾಗಿ ಇಲಾಖೆ ಪರಿಗಣಿಸಿದೆ.

ಪಠ್ಯ ಪುಸ್ತಕ ಹಾಗೂ ಸಾಮಗ್ರಿ ವಿತರಣೆಯಲ್ಲಿ ನಡೆಯುತ್ತಿದ್ದ ಗೋಲ್‍ಮಾಲ್ ತಡೆಗೆ ಸರ್ಕಾರ ಎರಡು ವರ್ಷದಿಂದ ಸ್ಯಾಟ್ಸ್ ಸಾಫ್ಟ್​ವೇರ್ ಅನುಷ್ಠಾನ ಮಾಡಿದೆ. ಇಲ್ಲಿ ಒಬ್ಬ ವಿದ್ಯಾರ್ಥಿ ಒಂದನೇ ತರಗತಿಗೆ ಪ್ರವೇಶ ಪಡೆದಾಗ ಸ್ಯಾಟ್ಸ್​ನಲ್ಲಿ ದಾಖಲು ಮಾಡಲಾಗುತ್ತದೆ. ವಿದ್ಯಾರ್ಥಿಗೆ ನೀಡುವ ಗುರುತಿನ ನಂಬರ್ 10ನೇ ತರಗತಿವರೆಗೂ ಇರುತ್ತದೆ. ವಿದ್ಯಾರ್ಥಿ ಮತ್ತು ತಂದೆ-ತಾಯಿ ಹೆಸರು, ಹುಟ್ಟಿದ ದಿನಾಂಕ ಹೊರತುಪಡಿಸಿ ತರಗತಿ ಪ್ರತಿ ವರ್ಷವೂ ಅಪ್​ಡೇಟ್ ಆಗುತ್ತದೆ. ಒಂದು ವೇಳೆ ವಿದ್ಯಾರ್ಥಿ ಮಧ್ಯದಲ್ಲೇ ಶಾಲೆ ಬಿಟ್ಟರೆ ಇಲಾಖೆಗೆ ಸುಲಭವಾಗಿ ಮಾಹಿತಿ ಸಿಗುತ್ತದೆ. ಬಹು ಉದ್ದೇಶದ ಅನುಕೂಲವಿಟ್ಟುಕೊಂಡು ಈ ಸಾಫ್ಟ್​ವೇರ್ ಅನುಷ್ಠಾನ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿ ಸಂಖ್ಯೆ ನಿಖರ ಮಾಹಿತಿಗೆ ಈಗ ಇಲಾಖೆಗೆ ಸ್ಪಷ್ಟವಾಗಿ ಸಿಗತೊಡಗಿದೆ. ಯಾವುದೇ ಶಾಲೆಗೆ ಪಠ್ಯಪುಸ್ತಕ ಹಾಗೂ ಇತರೆ ಸಾಮಗ್ರಿ ಹೆಚ್ಚು ಬಂದರೆ ಅಥವಾ ಕಡಿಮೆಯಾದರೆ ಇದಕ್ಕೆ ಮುಖ್ಯಶಿಕ್ಷಕರನ್ನೇ ಹೊಣೆಯನ್ನಾಗಿಸಲು ಇಲಾಖೆ ನಿರ್ಧರಿಸಿದೆ.

ಬೇಸಿಗೆಯಲ್ಲೂ ಬಿಸಿಯೂಟ: ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳಿಗೆ ಬೇಸಿಗೆ ರಜೆಯಲ್ಲಿ ಬಿಸಿಯೂಟ ನೀಡುವಂತೆ ಆದೇಶಿಸಿದ್ದು, ಜಿಲ್ಲೆಯಲ್ಲಿ ಬಿಸಿಯೂಟ ಏ.11ರಂದೇ ಪ್ರಾರಂಭವಾಗಿದೆ. ಇದು ಶಾಲೆ ಪ್ರಾರಂಭದ ದಿನಾಂಕ ಮೇ 28ರವರೆಗೂ ನಡೆಯಲಿದೆ. ಕಡೂರು ತಾಲೂಕು ಮಾತ್ರ ಬರಪೀಡಿತವೆಂದು ಘೊಷಣೆಯಾಗಿದೆ. ಆದರೆ ಚಿಕ್ಕಮಗಳೂರು, ಕಡೂರು, ಅಜ್ಜಂಪುರ ತಾಲೂಕುಗಳ ಹಲವು ಪ್ರದೇಶ ಬರಕ್ಕೆ ತುತ್ತಾಗಿವೆ. ಹೀಗಾಗಿ ಜಿಲ್ಲಾಡಳಿತ ಇಡೀ ಜಿಲ್ಲೆಯಲ್ಲಿ ಬೇಸಿಗೆ ಊಟ ಮಕ್ಕಳಿಗೆ ಉಣಬಡಿಸಲು ನಿರ್ಧರಿಸಿತ್ತು. ಪೋಷಕರು ಮತ್ತು ಮಕ್ಕಳ ಎಷ್ಟು ಬರುತ್ತಾರೆಂಬ ಒಪ್ಪಿಗೆಯನ್ನು ಜಿಲ್ಲೆಯ ಎಲ್ಲ ಶಿಕ್ಷಕರಿಂದ ಪಡೆದು 700 ಶಾಲೆಯಲ್ಲಿ ಬಿಸಿಯೂಟ ಪ್ರಾರಂಭಿಸಲಾಗಿದೆ. ಆರಂಭದಲ್ಲಿ 24 ಸಾವಿರ ಮಕ್ಕಳು ಬಿಸಿಯೂಟಕ್ಕೆ ಬರುತ್ತಿದ್ದರು. ಈಗ ಸಂಖ್ಯೆ 15 ಸಾವಿರಕ್ಕೆ ಇಳಿದಿದ್ದು, 450 ಶಾಲೆಯಲ್ಲಿ ಬೇಸಿಗೆ ಬಿಸಿಯೂಟ ಕಾರ್ಯಕ್ರಮ ನಡೆಯುತ್ತಿದೆ. ಅಡುಗೆ ಕಾರ್ಯಕರ್ತರಿಗೆ ಎರಡು ತಿಂಗಳ ಸಂಬಳ ಸಹ ಈ ಸಮಯದಲ್ಲಿ ನೀಡಲಾಗುತ್ತಿದೆ.

ನಾಳೆಯಿಂದ ವಿಶೇಷ ದಾಖಲಾತಿ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮತ್ತೆ ಸೇರ್ಪಡೆ ಮಾಡಲು ಇಲಾಖೆಯಿಂದ ಮೇ 16ರಿಂದ 31ರವರೆಗೆ ಎಲ್ಲ ಗ್ರಾಮಗಳಲ್ಲಿ ವಿಶೇಷ ದಾಖಲಾತಿ ಆಂದೋಲನ ನಡೆಯಲಿದೆ. ಗ್ರಾಮಗಳಲ್ಲಿ ಫ್ಲ್ಲೆಕ್ಸ್, ಬ್ಯಾನರ್ ಕಟ್ಟಿ ಪ್ರತಿ ಮಗುವನ್ನೂ ಶಾಲೆಗೆ ಕಡ್ಡಾಯವಾಗಿ ಸೇರಿಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ. ಮಧ್ಯದಲ್ಲೇ ಶಾಲೆ ಬಿಟ್ಟ ಮಕ್ಕಳನ್ನು ಅವರ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಲೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.