ದಾಖಲೆ ಬಾಡಿಗೆಗೆ ಪಪಂ ಮಳಿಗೆ ಹರಾಜು

ಕೊಪ್ಪ: ಬಸ್​ನಿಲ್ದಾಣ ಸಮೀಪ ಪಪಂಗೆ ಸೇರಿದ ವಾಣಿಜ್ಯ ಸಂಕೀರ್ಣದಲ್ಲಿರುವ 10 ಮಳಿಗೆಗಳು 50 ರಿಂದ 65 ಸಾವಿರ ರೂ.ವರೆಗೆ ಹಾಗೂ ಐಡಿಎಸ್​ಎಂಟಿ ವಾಣಿಜ್ಯ ಸಂಕೀರ್ಣದ 18 ಮಳಿಗೆಗಳು 18ರಿಂದ 30 ಸಾವಿರ ರೂ.ವರೆಗೆ ಹರಾಜಾಗುವ ಮೂಲಕ ಇತಿಹಾಸ ನಿರ್ವಿುಸಿದೆ.

10 ಮಳಿಗೆಗಳ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಗಳ ಮಾಸಿಕ ಬಾಡಿಗೆ ಈ ಬಾರಿ 10 ರಿಂದ 12 ಪಟ್ಟು ಹಾಗೂ ಐಡಿಎಸ್​ಎಂಟಿ ಮಳಿಗೆ 5 ರಿಂದ 6 ಪಟ್ಟು ಹೆಚ್ಚಾಗಿದೆ.

ಬಿಡ್​ದಾರರಲ್ಲಿ ಕೆಲವರು ತಾವು ಬಿಡ್ ಮಾಡಿದ ಮಳಿಗೆಗೆ ಠೇವಣಿ ಪಾವತಿಸಿಲ್ಲ. ಬಿಡ್ ಮಾಡಲು ಪಪಂಗೆ 30,000 ರೂ.ಡಿಡಿ ನೀಡಿದ್ದು ಬಿಡ್​ನಲ್ಲಿ ಮಳಿಗೆ ವಹಿಸಿಕೊಂಡ ನಂತರ 24 ಗಂಟೆಯೊಳಗೆ ಉಳಿದ ಠೇವಣಿ ಹಣ ಪಪಂಗೆ ಪಾವತಿಸಬೇಕಿತ್ತು. ಹೆಚ್ಚಿನ ಬಾಡಿಗೆಗೆ ಬಿಡ್ ಆಗಿರುವುದರಿಂದ ಹಾಲಿ ಬಾಡಿಗೆದಾರರಲ್ಲಿ ಅಂಗಡಿ ಮಳಿಗೆಗಳು ಕೈತಪ್ಪಿಹೋಗಿವೆ.

ಹಾಲಿ ಮಳಿಗೆದಾರರು ಹರಾಜು ಪ್ರಕ್ರಿಯೆ ಪ್ರಶ್ನಿಸಿ ಹೈ ಕೋರ್ಟ್​ನಿಂದ ತಡೆಯಾಜ್ಞೆ ನೀಡಿದ್ದು, ನ್ಯಾಯಾಲಯ ಆದೇಶ ನೀಡುವವರೆಗೆ ಬಾಡಿಗೆದಾರರನ್ನು ತೆರವು ಮಾಡದಂತೆ ಪಪಂಗೆ ನಿರ್ದೇಶನ ನೀಡಿದೆ. ಈ ಹಿಂದೆಯೂ ಐಡಿಎಸ್​ಎಂಟಿ ಮಳಿಗೆ ಹರಾಜಿನಲ್ಲಿ ಹೆಚ್ಚಿನ ಬಾಡಿಗೆಗೆ ಬಿಡ್ ಮಾಡಿದವರು ಠೇವಣಿ ಪಾವತಿಸದೆ ಮಳಿಗೆಗಳು ಖಾಲಿ ಬಿದ್ದಿದ್ದವು. ಇನ್ನು ಕೆಲವರು ಮಳಿಗೆಗಳನ್ನು ಸ್ವಲ್ಪ ದಿನ ಬಾಡಿಗೆ ಕಟ್ಟಲಾಗದೆ ಪಪಂಗೆ ವಾಪಸ್ ನೀಡಿದ್ದರು.

ಒಟ್ಟಾರೆಯಾಗಿ ಪಟ್ಟಣ ಪಂಚಾಯತ್ ಮಳಿಗೆಗಳು ದಾಖಲೆಯ ಬಾಡಿಗೆಗೆ ಹರಾಜಾಗಿರುವುದು ಬಾಡಿಗೆದಾರರಿಗೆ ಕಹಿ ಅನುಭವವಾಗಿದ್ದರೆ, ಇನ್ನು ಖಾಸಗಿ ಮಳಿಗೆಗಳ ಮಾಲೀಕರಿಗೆ ಖುಷಿ ನೀಡಿದೆ.

ಪಪಂ ಅಧ್ಯಕ್ಷರ ಗೈರು:  ಇರುವ ಬಾಡಿಗೆಯನ್ನು ಸ್ವಲ್ಪ ಹೆಚ್ಚಿಸಿ ಮುಂದುವರಿಸಿಕೊಡುವಂತೆ ಬಾಡಿಗೆದಾರರು ಪಪಂಗೆ ಮನವಿ ಮಾಡಿದರೂ ಪಪಂ ಮುಖ್ಯಾಧಿಕಾರಿಗಳು ಹರಾಜು ಕುರಿತು ಕೌನ್ಸಿಲ್ ಸಭೆ ನಡೆಸದೆ ಗಮನಕ್ಕೆ ತರದೆ ಹರಾಜು ಪ್ರಕ್ರಿಯೆ ನಡೆಸಿರುವುದನ್ನು ಖಂಡಿಸಿ ಪಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿ ಬಿಜೆಪಿ ಸದಸ್ಯರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ.