ಕೊಪ್ಪ: ಈ ಬಾರಿ ಸುರಿದ ಭಾರಿ ಮಳೆಗೆ ತಾಲೂಕಿನಲ್ಲಿ ಮನೆ, ಜಮೀನು, ರಸ್ತೆ, ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಅಂದಾಜು 70 ಕೋಟಿ ರೂ. ನಷ್ಟವಾಗಿದೆ. ಮನೆ ಕಳೆದುಕೊಂಡವರಿಗೆ ಶೇ.90 ರಷ್ಟು ಪರಿಹಾರ ನೀಡಿದ್ದು ವಿವಿಧ ಇಲಾಖೆಗಳಲ್ಲಿ ಹಾನಿಯಾದ ಪ್ರದೇಶದಲ್ಲಿ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಮಳೆ ಆರ್ಭಟಕ್ಕೆ 118 ಮನೆಗೆ ಹಾನಿಯಾಗಿದೆ. ಅವುಗಳಲ್ಲಿ 10 ಮನೆಗಳಲ್ಲಿ ವಾಸಿಸಲು ಅಸಾಧ್ಯ. 68 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಉಳಿದ 40 ಮನೆಗೆ ಕೊಂಚ ಹಾನಿ ಸಂಭವಿಸಿದೆ. ವಾಸಿಸಲು ಯೋಗ್ಯವಲ್ಲದ 10 ಮನೆಗಳಿಗೆ ಸರ್ಕಾರದಿಂದ 1 ಲಕ್ಷ ರೂ. ಪರಿಹಾರ ದೊರಕಿದ್ದು, ಭಾಗಶಃ ಹಾನಿಯಾದ 68 ಮನೆಗಳಲ್ಲಿ ಮೂರು ಮನೆ ಹೊರತುಪಡಿಸಿ ಉಳಿದ ಎಲ್ಲ ಮನೆಗಳಿಗೆ 25 ಸಾವಿರ ರೂ. ಪರಿಹಾರದ ಹಣ ಸಂದಾಯವಾಗಿದೆ. ಸ್ವಲ್ಪ ಹಾನಿ ಸಂಭವಿಸಿದ 10 ಮನೆಗಳಿಗೆ ಪರಿಹಾರ ಲಭಿಸಿದೆ. ಕಂದಾಯ ಇಲಾಖೆಯಲ್ಲಿ ಅಂದಾಜು 1.7 ಕೋಟಿ ರೂ. ಹಾನಿಯಾಗಿದೆ.
ಗಾಳಿ ಮಳೆಗೆ 267 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು, 3 ಪರಿವರ್ತಕಗಳು ಹಾನಿಗೊಂಡಿವೆ. ಹಾನಿಯಾದ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳನ್ನು ಬದಲಿಸಲಾಗಿದೆ. ಮೆಸ್ಕಾಂಗೆ ಅಂದಾಜು 35.99 ಲಕ್ಷ ರೂ. ನಷ್ಟವಾಗಿದೆ.
ಕೊಪ್ಪ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಒಳ ಚರಂಡಿಗಳಿಗೆ ಸೇರಿ ಅಂದಾಜು 65 ಲಕ್ಷ ರೂ. ಹಾನಿಯಾಗಿದೆ. ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿಪಡಿಸುವಂತೆ ಪಿಡಬ್ಲ್ಯುಡಿಗೆ ಸೂಚಿಸಲಾಗಿದೆ. ಉಳಿದ ಕೆಲಸ ಮಾಡಲು ಸರ್ಕಾರದಿಂದ ಹಣ ಬರಬೇಕು ಎಂದು ಪಪಂ ಮುಖ್ಯಾಧಿಕಾರಿ ಬಸವರಾಜ್ ತಿಳಿಸಿದ್ದಾರೆ.
ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ 6 ಕಡೆಗಳಲ್ಲಿ ಹಾನಿಯಾಗಿದ್ದು ಅಂದಾಜು 1.55 ಕೋಟಿ ರೂ. ನಷ್ಟವಾಗಿದೆ. ಅಂದಾಜು 908.04 ಎಕರೆ ಭತ್ತದ ಗದ್ದೆಗೆ ಹಾನಿಯಾಗಿ 49 ಲಕ್ಷ ರೂ. ನಷ್ಟವಾಗಿದೆ. ಸರ್ಕಾರದಿಂದ ರೈತರಿಗೆ ಹಂತ ಹಂತವಾಗಿ ಪರಿಹಾರದ ಹಣ ಬರುತ್ತಿದ್ದು, ರೈತರ ಖಾತೆಗೆ 7,200 ರೂ. ಜಮಾ ಆಗಿದೆ.
ತೋಟಗಾರಿಕಾ ಇಲಾಖೆಯಲ್ಲಿ 2937.24 ಎಕರೆಯಷ್ಟು ಭೂಮಿಗೆ ಹಾನಿ ಸಂಭವಿಸಿದ್ದು ಅಂದಾಜು 2.11 ಕೋಟಿ ರೂ. ನಷ್ಟ ಸಂಭವಿಸಿದೆ. 2136.2 ಎಕರೆಯಷ್ಟು ಕಾಫಿ ಬೆಳೆ ಹಾನಿಯಾಗಿದ್ದು ಅಂದಾಜು 1.53 ಕೋಟಿ ರೂ. ನಷ್ಟ ಸಂಭವಿಸಿದೆ. ರಾಜ್ಯ, ಜಿಲ್ಲಾ ಹೆದ್ದಾರಿ ಸೇರಿ 231 ಕಿಮೀ ರಸ್ತೆ ಹಾನಿಗೊಂಡಿದೆ. 50 ಸೇತುವೆಗಳು ಸಂಪರ್ಕ ಕಡಿದುಕೊಂಡಿವೆ. 66 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಅದರಲ್ಲಿ 33 ಸರ್ಕಾರಿ ಶಾಲೆಗಳು ಸೇರಿದ್ದು 1.5 ಕೋಟಿ ರೂ.ನಷ್ಟವಾಗಿದೆ. ಕುಡಿಯುವ ನಿರೋದಗಿಸುವ 25 ಪೈಪುಗಳು ಹಾಳಾಗಿ 40 ಲಕ್ಷ ರೂ. ಹಾಗೂ ನೀರಿನ ಟ್ಯಾಂಕ್ ಹಾಳಾಗಿ 50 ಲಕ್ಷ ರೂ. ನಷ್ಟ ಉಂಟಾಗಿದೆ.