More

    ಕೂಕ್ರಬೆಟ್ಟು ಶಾಲೆಗೆ ಹೊಸ ಬೆಳಕು

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಮುಚ್ಚುವ ಹಂತದಲ್ಲಿದ್ದ ಬಂಟ್ವಾಳದ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ, 4 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಿಸುವುದರ ಜತೆಗೆ ಎಂಟು ನೂರಕ್ಕೂ ಅಧಿಕ ಸಂಖ್ಯೆಯ ಮಕ್ಕಳು ಈ ಶಾಲೆ ಸೇರುವಂತೆ ಮಾಡಿದ ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್ ಮತ್ತೊಂದು ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ.

    ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಎರಡನೇ ಶಾಲೆಯನ್ನಾಗಿ ಗುರುವಾರ ದತ್ತು ಸ್ವೀಕರಿಸಿದೆ. ಕೂಕ್ರಬೆಟ್ಟು ಶಾಲೆಯ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದು, ಶಾಲೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ದತ್ತು ಸ್ವೀಕಾರದ ಮನವಿಯನ್ನು ಮುಖ್ಯಶಿಕ್ಷಕರ ಮೂಲಕ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸಲ್ಲಿಸಿದೆ.
    ಬೆಳ್ತಂಗಡಿಯ ಮರೋಡಿಯಲ್ಲಿರುವ ಕೂಕ್ರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಮುಚ್ಚುವ ಹಂತಕ್ಕೆ ತಲುಪಿತ್ತು. ಶಾಲೆಯನ್ನು ಹೇಗಾದರೂ ಮಾಡಿ ಉಳಿಸಿ ಬೆಳೆಸಬೇಕೆನ್ನುವ ಸ್ಥಳೀಯ ಶಿಕ್ಷಣಾಭಿಮಾನಿಗಳ ಆಹ್ವಾನದ ಮೇರೆಗೆ ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್ ಹಾಗೂ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದ ತಂಡ ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಕೂಕ್ರಬೆಟ್ಟು ಶಾಲೆಗೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿ ಸ್ಥಳೀಯರ ಸಹಕಾರದೊಂದಿಗೆ ಮನೆಗಳನ್ನು ಸಂಪರ್ಕಿಸಿ ಶಾಲೆ ಉಳಿಸುವ ಅನಿವಾರ್ಯತೆ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿತ್ತು. ಇದರ ಪರಿಣಾಮವಾಗಿ ಕಳೆೆದ ಶೈಕ್ಷಣಿಕ ವರ್ಷದಿಂದಲೇ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಗೊಂಡಿದ್ದು, ಒಂದೇ ವರ್ಷದಲ್ಲಿ ಮಕ್ಕಳ ಸಂಖ್ಯೆ 80 ದಾಟಿತು.

    ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಮರೋಡಿ ಉಪ ಸಮಿತಿ ರಚಿಸಿದ್ದು ಅದರ ಅಧ್ಯಕ್ಷ ಜಯಂತ್ ಕೋಟ್ಯಾನ್ ಮುಂದಾಳತ್ವದಲ್ಲಿ ಶಾಲೆ ಸಾಕಷ್ಟು ಪ್ರಗತಿ ಸಾಧಿಸಿದ್ದು ವಿದ್ಯಾರ್ಥಿಗಳ ಕಲಿಕೆಯ ಅನುಕೂಲಕ್ಕಾಗಿ ಅತಿಥಿ ಶಿಕ್ಷಕರನ್ನು ನೇಮಕ ಗೊಳಿಸಲಾಗಿದೆ. ಪ್ರಸ್ತುತ ಕರಾಟೆ, ನೃತ್ಯ ಯೋಗ, ಸಂಗೀತ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ತಂಡ ಮುಂದಿನ ವರ್ಷ 200ಕ್ಕಿಂತಲೂ ಅಧಿಕ ಮಕ್ಕಳನ್ನು ದಾಖಲಿಸಿಕೊಳ್ಳುವ ಉತ್ಸಾಹದಲ್ಲಿದೆ. ಇತ್ತೀಚೆಗಷ್ಟೆ ಶಾಲೆ ವಜ್ರಮಹೋತ್ಸವವನ್ನು ಸಡಗರದಿಂದ ಆಚರಿಸಿದೆ.

    ಗ್ರಾಮ ವಾಸ್ತವ್ಯ
    ಶಾಲೆಯನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯುವ ಸದುದ್ದೇಶವನ್ನಿಟ್ಟುಕೊಂಡು ಬಂಟ್ವಾಳದ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ದತ್ತು ಸ್ವೀಕರಿಸಿದೆ. ಮುಂದಿನ ದಿನದಲ್ಲಿ ಮತ್ತೆ ಗ್ರಾಮ ವಾಸ್ತವ್ಯ ನಡೆಸಿ ಇನ್ನಷ್ಟು ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯುವ ಪ್ರಯತ್ನ ದೊಂದಿಗೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ, ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣದ ಕನಸಿನೊಂದಿಗೆ ಮುನ್ನಡೆಯಲಿದೆ.

    ಗ್ರಾಮೀಣ ಭಾಗವಾಗಿರುವ ಕೂಕ್ರಬೆಟ್ಟುವಿನಲ್ಲಿ ದೂರದ ಭಾಗಗಳಿಂದ ಬರುವ ವಿದ್ಯಾರ್ಥಿಗಳನ್ನು ಕರೆತರಲು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲಾ ಬಸ್ ನೀಡಲಾಗುವುದು. ಮುಂದಿನ ವರ್ಷ 200ಕ್ಕಿಂತಲೂ ಅಧಿಕ ಮಕ್ಕಳನ್ನು ಶಾಲೆಗೆ ದಾಖಲಿಸುವ ಗುರಿ ಹೊಂದಬೇಕು.
    ಪ್ರಕಾಶ್ ಅಂಚನ್ ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ

    ಕೂಕ್ರಬೆಟ್ಟು ಶಾಲೆಯ ಮುಂದಿನ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರು ಸಂಪೂರ್ಣ ಸಹಕಾರದ ಭರವಸೆ ನೀಡಿದ್ದು ಶಾಲೆಯ ಹೊಸ ಕಟ್ಟಡದ ನಿರ್ಮಾಣದ ಕನಸು ಶೀಘ್ರ ನನಸಾಗಲಿದೆ.
    ಜಯಂತ್ ಕೋಟ್ಯಾನ್ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಮರೋಡಿ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts