ಬಸವಣ್ಣನವರದು ಕೊಲೆಯಲ್ಲ, ಇಚ್ಛಾಮರಣ

ಕೂಡಲಸಂಗಮ: ಬಸವಣ್ಣನ ವಿಚಾರಧಾರೆಯಲ್ಲಿ ಅಪಾರ ಅಭಿಮಾನ ವಿರುವ ವಿಚಾರವಾದಿ ಕೆ.ಎಸ್. ಭಗವಾನರಂಥವರೂ ಬಸವಣ್ಣನವರು ಕೊಲೆಯಾದರು ಎಂದು ಹೇಳಿರು ವುದು ಸೂಕ್ತವಲ್ಲ ಎಂದು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

ಬಸವಣ್ಣನವರು ಕೇವಲ ಕ್ರಾಂತಿಕಾರಿಗಳಲ್ಲ. ಮಹಾನ್ ಯೋಗಿಗಳೂ ಆಗಿದ್ದರು. ಇಚ್ಛಾಮರಣ ಎನ್ನುವುದು ಒಂದು ಯೋಗಿಕ ಪ್ರಕ್ರಿಯೆ. ಅದನ್ನು ಯಶಸ್ವಿಯಾಗಿ ಸಾಧಿಸಿದ ಬಸವಣ್ಣನವರು ಲಿಂಗೈಕ್ಯ ಸಮಯದ ವಚನಗಳಲ್ಲಿ ತಮ್ಮ ಆಧ್ಯಾತ್ಮಿಕ ಸ್ಥಿತಿ ವಿವರಿಸಿದ್ದಾರೆ. ಬಸವಣ್ಣನವರು ಗಡಿಪಾರಾಗಿ ಹೊರಟ ಬಳಿಕ ವಿವಿಧ ಸ್ಥಳಗಳನ್ನು ಸಂದರ್ಶಿಸುತ್ತ ಬಂದಿದ್ದಾರೆ. ಇದಕ್ಕೆ ದಾರಿಯುದ್ದಕ್ಕೂ ಇರುವ ಬಸವಣ್ಣನವರ ಗುಡಿಗಳೇ ಸಾಕ್ಷಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜ್ಜಳನ ಸೈನ್ಯ ಬೆನ್ನುಹತ್ತಿ ಹೋದುದು ವಚನ ಸಾಹಿತ್ಯ ರಕ್ಷಿಸಲು ಹೊರಟ ಚನ್ನಬಸವಣ್ಣ, ಮಡಿವಾಳ ಮಾಚಿದೇವನವರ ನೇತೃತ್ವದ ತಂಡವನ್ನು ಹೊರತು ಏಕಾಂಗಿಯಾಗಿ ಕಲ್ಯಾಣದಿಂದ ಬಂದ ಬಸವಣ್ಣನ ವರನ್ನಲ್ಲ. ಕಾಲಜ್ಞಾನ ವಚನಗಳಲ್ಲಿ ಇದೆಲ್ಲವೂ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇದನ್ನು ವಿಚಾರವಾದಿಗಳು ಅರಿಯಬೇಕು ಎಂದು ಸಲಹೆ ನೀಡಿದ್ದಾರೆ.

ಬಸವಣ್ಣನವರಿಗಿದ್ದದ್ದು ಒಬ್ಬಳೇ ಪತ್ನಿ: ಬಸವಣ್ಣನವರು ಮದುವೆಯಾದುದು ಸೋದರ ಸೊಸೆ ನೀಲಗಂಗಳನ್ನು ಮಾತ್ರ. ನಂತರದ ಕವಿಗಳು ನೀಲಾ ಮತ್ತು ಗಂಗಾ ಬೇರೆ ಬೇರೆ ಎಂದು ಮಾಡಿ ಇಬ್ಬರು ಪತ್ನಿಯರ ಕಲ್ಪನೆ ತಂದರು. ಇಂದಿಗೂ ಕೃಷ್ಣಾ ನದಿಯ ಒಂದು ಬದಿಗೆ ಬಸವಣ್ಣನವರ ಐಕ್ಯ ಮಂಟಪ ಇದ್ದರೆ, ಇನ್ನೊಂದು ಬದಿಗೆ ನೀಲಾಂಬಿಕಾ ಐಕ್ಯ ಮಂಟಪವಿದೆ ಎಂದು ತಿಳಿಸಿದ್ದಾರೆ.

ನಾಳೆ ಬಸವ ಲಿಂಗೈಕ್ಯ ಸಂಸ್ಮರಣೆ: ಬಸವಣ್ಣನವರ ವಿದ್ಯಾಭೂಮಿ, ಲಿಂಗೈಕ್ಯ ಕ್ಷೇತ್ರ ಕೂಡಲಸಂಗಮದಲ್ಲಿ ಬಸವಧರ್ಮ ಪೀಠದಿಂದ ಆ.15ರ ಸಂಜೆ 5ಗಂಟೆಗೆ ಬಸವಣ್ಣನವರ 823ನೇ ಲಿಂಗೈಕ್ಯ ಸಂಸ್ಮರಣೆ ಸಮಾರಂಭ ನಡೆಯಲಿದೆ. ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸಾನ್ನಿಧ್ಯ ವಹಿಸುವರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಇಳಕಲ್ಲ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಬಸವ ಧರ್ಮ ಪೀಠದ ಮಾಹಾದೇಶ್ವರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.

ಕುಷ್ಟಗಿ ಮಾಜಿ ಶಾಸಕ ಕೆ.ಶರಣಪ್ಪ ಷಟ್​ಸ್ಥಲ ಧ್ವಜಾರೋಹಣ ನೆರವೇರಿಸುವರು. ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತೆಲಂಗಾಣ ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಧನರಾಜ ಜೀರಗೆ, ಬಾದಾಮಿಯ ವಿಶ್ರಾಂತ ಪ್ರಾಧ್ಯಾಪಕಿ ಶಾರದಾ ಮೇಟಿ ಭಾಗವಹಿಸುವರು.

16ರಂದು ವಿಶೇಷ ಪ್ರಾರ್ಥನೆ: ಬಸವಣ್ಣನವರು ಶ್ರಾವಣ ಪಂಚಮಿಯಂದು ಇಚ್ಛಾಮರಣಿಯಾಗಿ ಲಿಂಗೈಕ್ಯರಾದರೆ, ಧರ್ಮ ಪತ್ನಿ ನೀಲಾಂಬಿಕೆ ಮರು ದಿನ ಷಷ್ಠಿಯಂದು ಯೋಗ ಸಿದ್ಧಿಯಿಂದ ಲಿಂಗೈಕ್ಯರಾದರು. ತಂಗಡಗಿ ಬಳಿಯ ಲಿಂಗೈಕ್ಯ ಸ್ಥಳದಲ್ಲಿ ಬಸವ ಧರ್ಮ ಪೀಠದಿಂದ ಆ.16ರಂದು ವಿಶೇಷ ಪ್ರಾರ್ಥನೆ, ದಾಸೋಹ ಏರ್ಪಡಿಸಲಾಗಿದೆ.

ರಾಜಧಾನಿಯಲ್ಲಿ ಬಸವ ಪಂಚಮಿ: ಬೆಂಗಳೂರಿನ ಪುಟ್ಟಣ್ಣಶೆಟ್ಟಿ ಪುರಭವನದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೊತ್ಸವ ಹಾಗೂ 823ನೆಯ ಬಸವಣ್ಣನವರ ಲಿಂಗೈಕ್ಯ ಸಂಸ್ಮರಣೆಯನ್ನು ಬೆಳಗ್ಗೆ 10 ಗಂಟೆಗೆ ಆಚರಿಸಲಾಗುತ್ತಿದ್ದು, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಗಂಗಾದೇವಿ ಕಾರ್ಯಕ್ರಮದ ನೇತೃತ್ವ ವಹಿಸುವರು. ಪ್ರತಿಯೊಬ್ಬ ಬಸವ ಅನುಯಾಯಿಯೂ ಬಸವ ಜಯಂತಿಯಂತೆ ಬಸವ ಪಂಚಮಿಯನ್ನು ತಮ್ಮ ತಮ್ಮ ಮನೆಯಲ್ಲಿ ಆಚರಿಸಬೇಕು ಎಂದು ಮಾತಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವಣ್ಣನವರು 62 ವರ್ಷ 3 ತಿಂಗಳು 2 ದಿವಸಗಳ ಕಾಲ ಇದ್ದು, 30.7.1196ರ ನಳನಾಮ ಸಂವತ್ಸರ ಶ್ರಾವಣ ಶುದ್ಧ ಪಂಚಮಿಯಂದು ಇಚ್ಛಾಮರಣಿಯಾಗಿ ದೇವನಲ್ಲಿ ಒಂದಾದರು. ಅಂದಿನಿಂದಲೂ ಶ್ರಾವಣ ಶುದ್ಧ ಪಂಚಮಿ ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ.

| ಮಾತೆ ಮಹಾದೇವಿ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ