ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಕಡ್ಡಾಯಗೊಳಿಸಿ

ಕೂಡಲಸಂಗಮ: ಸರ್ಕಾರ ಬಸವ ಜಯಂತಿಯನ್ನು ಬಸವಣ್ಣನ ಜನ್ಮ ಸ್ಥಳ ಬಸವನಬಾಗೇವಾಡಿ, ವಿದ್ಯಾಭೂಮಿ ಹಾಗೂ ಐಕ್ಯಸ್ಥಳ ಕೂಡಲಸಂಗಮ, ಕಾರ್ಯ ಕ್ಷೇತ್ರ ಬಸವ ಕಲ್ಯಾಣದಲ್ಲಿ ಆಚರಿಸಿದರೆ ಅರ್ಥಪೂರ್ಣವಾಗುವುದು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಾಹಾದೇಶ್ವರ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠದ ಮಹಾಮನೆಯಿಂದ ಬಸವಣ್ಣ ಐಕ್ಯ ಸ್ಥಳದವರೆಗೆ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಪುತ್ಥಳಿ ಮೆರವಣಿಗೆ ಹಾಗೂ ಪಥ ಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾರಾಷ್ಟ್ರ, ಕರ್ನಾಟಕ, ತೆಲಗಾಂಣ ಸರ್ಕಾರಗಳು ಬಸವ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಜಾರಿಗೆ ತಂದು ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿವೆ. ಕೇಂದ್ರ ಸರ್ಕಾರ ಇಂತಹ ಕಾರ್ಯ ಮಾಡಬೇಕು ಎಂದರು. ಬಸವಣ್ಣನವರ ಸಂದೇಶ ಸಾರ್ವಕಾಲಿಕ. ಇಂತಹ ಶರಣರ ಸಂದೇಶದ ಮೇಲೆ ಜೀವನ ಸಾಗಿಸಿದರೆ ಬದುಕು ಸುಂದರವಾಗುವುದು. ಜತೆಗೆ ಬಸವಣ್ಣನವರು ಕಂಡ ಕಲ್ಯಾಣ ರಾಜ್ಯ ನಿರ್ಮಾಣವಾಗುವುದು ಎಂದರು.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಚಾರ್ಯ ಯಲ್ಲಪ್ಪ ಸವದತ್ತಿ, ಸೋಮಶೇಖರ ಅತಡಕರ್, ಶ್ರೀಶೈಲ ಪಟ್ಟಣಶೆಟ್ಟಿ, ಬಸವ ಭಾರತಿ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಂಭುಲಿಂಗ ಭದ್ರಶೆಟ್ಟಿ, ರಾಷ್ಟ್ರೀಯ ಬಸವ ದಳದ ದಿಲೀಪ್ ಭತಮುರ್ಗಿ, ಕೆ. ಪ್ರವೀಣ, ಮಹಾಂತೇಶ ಎಮ್ಮಿ ಇತರರಿದ್ದರು.

ವಚನ ಗೀತೆಗಳಿಗೆ ನೃತ್ಯ
ಬೆಳಗ್ಗೆ 7 ರಿಂದ 8 ಗಂಟೆವರೆಗೆ ಪೂಜಾ ವ್ರತ ಕಾರ್ಯಕ್ರಮ ನಡೆಯಿತು. 8.30 ಗಂಟೆಗೆ ಬಸವ ಧರ್ಮ ಪೀಠದ ಧ್ಯಾನ ಮಂಟಪದಲ್ಲಿ ಬಸವಣ್ಣನ ತೊಟ್ಟಿಲು ಕಾರ್ಯಕ್ರಮ, ನಂತರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಭಕ್ತರು ಬಸವಣ್ಣನ ವಚನ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ನಂತರ ಐಕ್ಯ ಸ್ಥಳದಲ್ಲಿ ಮಾಹಾದೇಶ್ವರ ಸ್ವಾಮೀಜಿ ಹಾಗೂ ಭಕ್ತರು ಪ್ರಾರ್ಥನೆ, ವಚನ ಪಠಣ ಮಾಡಿದರು.

ನವಜಾತ ಶಿಶುವಿಗೆ ಬಸವ ನಾಮಕರಣ
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ವತಿಯಿಂದ ಮಂಗಳವಾರ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಬಸವ ಜಯಂತಿ ಸಮಾರಂಭದಲ್ಲಿ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನವಜಾತ ಶಿಶುವಿಗೆ ಬಸವ ಎಂಬ ನಾಮಕರಣ ಮಾಡಿದರು.
ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದ ಅಕ್ಕಮ್ಮ ಹಾಗೂ ರವಿ ಚಲವಾದಿ ದಂಪತಿಗೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಜನಿಸಿದ ಗಂಡು ಮಗುವಿಗೆ ಬಸವ ಎಂಬ ನಾಮಕರಣ ಮಾಡಲಾಯಿತು. ಶ್ರೀಗಳು ಮಗುವಿಗೆ ವಿಭೂತಿ ಹಚ್ಚಿ ಇಷ್ಟಲಿಂಗ, ಬಸವಣ್ಣನವರ ವಚನ ಪುಸ್ತಕ ನೀಡಿ ವಚನಗಳ ಮೂಲಕ ಮಗುವಿಗೆ ಶುಭ ಹಾರೈಸಿದರು.

ತೋಟಗಾರಿಕೆ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಅಶೋಕ ಆಲೂರ ಮಾತನಾಡಿ, ಬಂಡಾಯದ ಪ್ರಥಮ ಹರಿಕಾರ ಬಸವಣ್ಣ. ಜಾತಿ ಮತ್ತು ವೃತ್ತಿಯ ಕೊಂಡಿಯನ್ನು ಬಸವಾದಿ ಶಿವಶರಣರು 12ನೇ ಶತಮಾನದಲ್ಲಿಯೇ ಕಿತ್ತೊಗೆದು ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಿದ್ದರು ಎಂದರು.

ಸಮಾರಂಭದಲ್ಲಿ ಸಾರಂಗಮಠದ ಜಾತವೇದ ಶಿವಾಚಾರ್ಯ ಸ್ವಾಮೀಜಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿ ತಹಸೀಲ್ದಾರ್ ಆರ್.ಎಸ್. ಹಿರೇಮಠ ಇದ್ದರು. ಆದಪ್ಪ ಗೊರಚಿಕ್ಕನವರ ಸ್ವಾಗತಿಸಿ, ನಿರೂಪಿಸಿದರು.

Leave a Reply

Your email address will not be published. Required fields are marked *