ಸಂತ್ರಸ್ತರ ಸಮಸ್ಯೆ ಐದು ವರ್ಷ ನೆನಪಾಗಲಿಲ್ಲವೇ?

ಕೂಡಲಸಂಗಮ: ಆಲಮಟ್ಟಿ ಮುಳುಗಡೆ ಸಂತ್ರಸ್ತರ ಬಗ್ಗೆ ಮಾತನಾಡುವ ಮೋದಿಗೆ 5 ವರ್ಷದ ಅಧಿಕಾರದಲ್ಲಿದ್ದಾಗ ನೆನಪಾಗಲಿಲ್ಲವೆ ಎಂದು ಮೈತ್ರಿ ಪಕ್ಷಗಳ ಅಭ್ಯರ್ಥಿ ವೀಣಾ ಕಾಶಪ್ಪನವರ ಪ್ರಶ್ನಿಸಿದರು.

ಕೂಡಲಸಂಗಮದ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಆವರಣದಲ್ಲಿ ಶನಿವಾರ ನಡೆದ ಕೂಡಲಸಂಗಮ ಜಿಪಂ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶಭಕ್ತಿ ಎಲ್ಲರಲ್ಲೂ ಇದೆ. ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ಮಾತನಾಡಿ, 15 ವರ್ಷ ನಿದ್ದೆ ಮಾಡಿದ ಗದ್ದಿಗೌಡರಿಗೆ ಮತ ಕೇಳುವ ನೈತಿಕ ಹಕ್ಕು ಇಲ್ಲ. ಹೀಗಾಗಿ ಮೋದಿ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಮಲಪ್ರಭಾ ನದಿ ದಡದ ಸಂತ್ರಸ್ತರ ಸಮಸ್ಯೆಯನ್ನು ದೊಡ್ಡನಗೌಡ ಪಾಟೀಲ ಬಗೆಹರಿಸಿಲ್ಲ. ದೊಡ್ಡನಗೌಡರು ತಮ್ಮ ಹೆಂಡತಿ, ಮಕ್ಕಳೊಂದಿಗೆ ಒಂದು ದಿನ ಸಂತ್ರಸ್ತರ ಶೆಡ್‌ನಲ್ಲಿ ವಾಸ ಮಾಡಲಿ. ಆಗ ಸಂತ್ರಸ್ತರ ಸಮಸ್ಯೆ ಏನು ಎಂಬುದು ಗೊತ್ತಾಗುತ್ತದೆ ಎಂದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಲಪ್ರಭಾ ನದಿ ದಡದ ಸಂತ್ರಸ್ತರ ಸಮಸ್ಯೆ ಶಾಶ್ವತವಾಗಿ ಪರಿಹರಿಸಲು 800 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. 10 ಪುನರ್ ವಸತಿ ಕೇಂದ್ರ ಸ್ಥಾಪಿಸಿ, ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವುದರ ಜತೆಗೆ, ನಿವೇಶನ ವಿತರಿಸುವ ಕಾರ್ಯ ಮಾಡಲಾಗಿದೆ ಎಂದರು.

ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ, ಹಿರಿಯ ಮುಖಂಡ ಗಂಗಣ್ಣ ಬಾಗೇವಾಡಿ, ಸಂಗಣ್ಣ ಓಲೇಕಾರ, ಚನ್ನಪ್ಪಗೌಡ ನಾಡಗೌಡ, ಎಂ.ಎಸ್. ಪಾಟೀಲ ಮಾತನಾಡಿದರು. ಶಿವಲಿಂಗಪ್ಪ ನಾಲತವಾಡ, ಎಸ್.ಎಂ. ಪುರಾಣಿಕ, ಶೇಖರಗೌಡ ಗೌಡರ, ಎ.ಬಿ. ಕೋಟೂರ, ಪ್ರಭು ಹಿರೇಮಠ, ಶೇಖಪ್ಪ ದೇಶಿ, ಲಕ್ಷ್ಮೀಪುತ್ರ ಮೇಲಿನಮನಿ, ವಸಂತ ದೇಶಪಾಂಡೆ, ಭೀಮಶಿ ಯರಝರಿ ಇತರರಿದ್ದರು.