ಬೇಲದಕುಪ್ಪೆಯಲ್ಲಿ ಕೊಂಡೋತ್ಸವ ವೈಭವ

ಮೈಸೂರು: ಬಂಡೀಪುರದ ದಟ್ಟಾರಣ್ಯದಲ್ಲಿರುವ ಬೇಲದಕುಪ್ಪೆಯಲ್ಲಿ ಮಹದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.

ಸರಗೂರು ತಾಲೂಕಿನ ಬೇಲದಕುಪ್ಪೆಯ ಮಹದೇಶ್ವರ ದೇಗುಲದ ಆವರಣದಲ್ಲಿ ಹಾಲರವೆ ಉತ್ಸವ ಸಮೇತ ಕೊಂಡೋತ್ಸವ ಅದ್ದೂರಿಯಾಗಿ ನಡೆಯಿತು. ಗುಂಡಪ್ಪ ಎಂಬುವರು ಮೊದಲು ಕೊಂಡ ಹಾಯ್ದ ಬಳಿಕ ಭಕ್ತರು ಸಹ ಕೊಂಡ ಹಾಯ್ದು ಭಕ್ತಿ ಮೆರೆದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಕೊಂಡೋತ್ಸವ ಬಳಿಕ ನಾಲ್ಕು ಚಿಕ್ಕ ತೇರುಗಳ ಉತ್ಸವವೂ ನಡೆಯಿತು. ಕಂಸಾಳೆ, ಡೊಳ್ಳುಕುಣಿತ, ಗೆಜ್ಜೆಕುಣಿತ, ವೀರಗಾಸೆ ಸೇರಿದಂತೆ ಇನ್ನಿತರ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.
ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಕೇರಳದಿಂದಲೂ ಭಕ್ತರು ಬಂದಿದ್ದರು.

ಖಾಸಗಿ ವಾಹನಗಳನ್ನು ನಿರ್ಬಂಧಿಸಿದ್ದರಿಂದ ಭಕ್ತರಿಗಾಗಿ ಜಿಲ್ಲಾಡಳಿತದಿಂದ 60 ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿತ್ತು. ಅರಣ್ಯ ಇಲಾಖೆ, ಹರಳಹಳ್ಳಿ ಗೇಟ್ ಬಳಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿತ್ತು. ಕಾಡಿನ ರಸ್ತೆ ಕಿರಿದಾದ್ದರಿಂದ ಬಸ್ ಸಂಚಾರಕ್ಕೆ ತೊಂದರೆಯಾಗಿ ವಾಹನ ದಟ್ಟಣೆ ಉಂಟಾಗಿ ಸವಾರರು ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸುವಂತಾಯಿತು. ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ದಟ್ಟಣೆ ಎದುರಿಸುವುದು ಅನಿವಾರ್ಯವಾಗಿತ್ತು.

ಜನದಟ್ಟಣೆಯಿಂದ ಇಡೀ ಜಾತ್ರೆಯೇ ಧೂಳುಮಯವಾಗಿತ್ತು. ಮಣ್ಣಿನ ದಾರಿ ಆಗಿದ್ದರಿಂದ ಇನ್ನಷ್ಟು ಧೂಳು ಹೆಚ್ಚಾಗಲು ಕಾರಣವಾಯಿತು. ಜಾತ್ರೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಬೇಲದಕುಪ್ಪೆಯು ಬಂಡೀಪುರ ಹುಲಿ ಯೋಜನೆಯ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಹೆಡಿಯಾಲ ವಲಯದಲ್ಲಿದೆ. ಹೀಗಾಗಿ ವಿವಿಧ ನಿರ್ಬಂಧಗಳೊಂದಿಗೆ ಅರಣ್ಯ ಇಲಾಖೆ ಜಾತ್ರೆಗೆ ಅವಕಾಶ ಕಲ್ಪಿಸಿತ್ತು.