ವೈದ್ಯಾಧಿಕಾರಿಯಿಲ್ಲದ ಪಶು ಚಿಕಿತ್ಸಾಲಯ

ಕೊಂಡ್ಲಹಳ್ಳಿ: ಬಿ.ಜಿ.ಕೆರೆ ಪಶು ಚಿಕಿತ್ಸಾಲಯದಲ್ಲಿ ವರ್ಷದಿಂದ ವೈದ್ಯಾಧಿಕಾರಿ ಇಲ್ಲದೇ ಸುತ್ತಮುತ್ತ ಗ್ರಾಮಗಳ ರಾಸು ಪಾಲಕರಿಗೆ ಪಶು ಆಸ್ಪತ್ರೆ ಇದ್ದರೂ ಪ್ರಯೋಜನವಿಲ್ಲದಂತಾಗಿದೆ.

ಈ ಆಸ್ಪತ್ರೆಯ ವೈದ್ಯಾಧಿಕಾರಿ ವರ್ಷದ ಹಿಂದೆ ವರ್ಗಾವಣೆಯಾಗಿದ್ದರು. ಕೆಲವು ದಿನಗಳ ಹಿಂದೆ ರಾಯಪುರದ ವೈದ್ಯರನ್ನು ನಿಯೋಜಿಸಲಾಗಿದೆ ಎನ್ನುವುದು ಪಶು ಸಂಗೋಪನೆ ಇಲಾಖೆ ಮಾಹಿತಿ. ಅವರು ಲಭ್ಯವಿಲ್ಲದ ಹಿನ್ನೆಲೆ ರೈತರು ಖಾಸಗಿ ವೈದ್ಯರಿಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಮುತ್ತಿಗಾರಹಳ್ಳಿ, ಸೂರಮ್ಮನಹಳ್ಳಿ ಗ್ರಾಮಸ್ಥರಿಗೆ ಪಶು ಆಸ್ಪತ್ರೆ ಇದ್ದರೂ, ಸೇವೆಗಳು ದೊರೆಯದಂತಾಗಿದೆ.

ಮನುಷ್ಯರಂತೆ ದನ ಕರುಗಳಿಗೆ ರೋಗ ಬರುವುದು ಸಹಜ. ಆಸ್ಪತ್ರೆ ಇದ್ದೂ ವೈದ್ಯರಿಲ್ಲದಿದ್ದರೆ ಏನು ಪ್ರಯೋಜನ. ತುರ್ತು ಸಂದರ್ಭದಲ್ಲಿ ಚಿಕಿತ್ಸೆ ದೊರೆಯದೇ ಹಲವು ರಾಸುಗಳು ಮೃತಪಟ್ಟಿವೆ ಎಂಬುದು ಮೊಗಲಹಳ್ಳಿ ರೈತ ಎಂ.ಕೆ.ಓಂಕಾರಪ್ಪ ಅವರ ಆರೋಪ.

ಆಸ್ಪತ್ರೆಗೆ ವೈದ್ಯರನ್ನು ನೇಮಕಾತಿ ಮಾಡುವ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬುದು ಪಶುಪಾಲಕರ ಆಗ್ರಹ.