ಕೊಂಡ್ಲಹಳ್ಳಿ: ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳನ್ನು ಮರಳಿ ಕರೆ ತರಲು ಶಿಕ್ಷಕರು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.
ಬಿ.ಜಿ. ಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಗಳವಾರ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ ಪರಿಶೀಲಿಸಿದರು. ಪ್ರೌಢಶಾಲೆ ವಿದ್ಯಾರ್ಥಿನಿಯರು ಗೈರಾಗಿರುವ ಬಗ್ಗೆ ಮಾಹಿತಿ ಕೇಳಿದರು.
ಗೈರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪಾಲಕರ ಮನವೊಲಿಸಬೇಕು. ಜತೆಗೆ ಈ ಬಗ್ಗೆ ಪ್ರತ್ಯೇಕ ರಿಜಿಸ್ಟರ್ ನಿರ್ವಹಿಸಬೇಕು. ಶಾಲೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಭಾವಚಿತ್ರಗಳನ್ನು ಪ್ರದರ್ಶಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ದೊರೆಯುತ್ತದೆ ಎಂದು ಸಲಹೆ ನೀಡಿದರು.
ಹೊಸದಾಗಿ ಆರಂಭವಾದ ಎಲ್ಕೆಜಿ ತರಗತಿಗೆ ಭೇಟಿ ನೀಡಿ ಬೋಧನಾ ವಿಧಾನ ಗಮನಿಸಿದರು, ಚಿಣ್ಣರೊಂದಿಗೆ ಮಾತನಾಡಿದರು.
ಅಂಡರ್ ಪಾಸ್ಗೆ ಮನವಿ: ಗ್ರಾಮದ ಪಬ್ಲಿಕ್ ಶಾಲೆಗೆ ಹೊಂದಿಕೊಂಡಿರುವ ಹೈವೆ ರಸ್ತೆಗೆ ಅಂಡರ್ ಪಾಸ್ ನಿರ್ಮಿಸಬೇಕು ಗ್ರಾಪಂ ಸದಸ್ಯ ನಾಗಭೂಷಣ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಸೀಲ್ದಾರ್ ಬಸವರಾಜ್, ಬಿಇಒ ಎಸ್. ಸೋಮಶೇಖರ್, ಸಿಡಿಪಿಒ ಹೊನ್ನಪ್ಪ, ಗ್ರಾಪಂ ಕಾರ್ಯದರ್ಶಿ ರಾಜಣ್ಣ ಇತರರಿದ್ದರು.