More

    ಬರದೂರಿನ ಬತ್ತಿದ ಬಾವಿಗಳಲ್ಲಿ ಜೀವಜಲ

    ರಾಮಚಂದ್ರ ಟಿ. ಕೊಂಡ್ಲಹಳ್ಳಿ: ಮೊಳಕಾಲ್ಮೂರಲ್ಲಿ ಸಾವಿರ ಅಡಿ ಬಾವಿ ತೋಡಿದರೂ ಒಂದಿಂಚೂ ನೀರು ಬಾರದ ದುಃಸ್ಥಿತಿಯಿತ್ತು. ಆದರೆ, ಈ ಸಲದ ಮಳೆಯಿಂದಾಗಿ ಅಂತರ್ಜಲ ವೃದ್ಧಿಯಾಗಿ ಜೀವಜಲ ಹೊಳೆಯುತ್ತಿದೆ.

    ತಾಲೂಕಿನಲ್ಲಿ ಒಂದು ವರ್ಷ ಮಳೆ ಬಂದರೆ ನಾಲ್ಕೈದು ವರ್ಷ ಮತ್ತೆ ಆಕಾಶ ನೋಡುವ ಪರಿಸ್ಥಿತಿ ಇರುತ್ತಿತ್ತು. ಸಾವಿರ ಅಡಿ ಕೊರೆದರೂ ಒಂದಿಂಚು ನೀರು ಸಿಗುತ್ತಿರಲಿಲ್ಲ. ಇದರಿಂದಾಗಿ ಇಲ್ಲಿ ಬೇಸಾಯವೂ ಪಾರ್ಟ್ ಟೈಂ ಎನ್ನುವಂತಿದೆ.

    ಕೊಂಡ್ಲಹಳ್ಳಿ ವ್ಯಾಪ್ತಿಯಲ್ಲಿ ಈ ಬಾರಿ ಒಂದು ಬಿರುಸಾದ ಮಳೆ ಬರಲಿಲ್ಲ. ಹೀಗಿದ್ದರೂ ಈ ಗ್ರಾಮದ ಸುತ್ತಲಿನ ಮಾರಮ್ಮನಹಳ್ಳಿ, ನೇತ್ರನಹಳ್ಳಿ, ಬೆಳವಿನಮರದಟ್ಟಿ ಇತರ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆ, ತೆರೆದ ಬಾವಿಗಳಲ್ಲಿ ಜೀವಜಲ ಉಕ್ಕಿದೆ.

    ಈ ಪ್ರದೇಶದ ಕೊಳವೆಬಾವಿ ಮಾತ್ರವಲ್ಲ, ಕಪ್ಪಲೆಗಳಲ್ಲಿನ 50 ರಿಂದ 60 ಅಡಿ ಆಳದ ಹಳೆಯ ಬಾವಿಗಳಲ್ಲಿ ನೀರು ಭರ್ತಿಯಾಗಿದೆ. ಅಷ್ಟೇ ಅಲ್ಲ, ಹಲವು ಬಾವಿಗಳಿಂದ ತುಂಬಿ ಹರಿಯುತ್ತಿರುವುದು ಕಂಡುಬರುತ್ತಿದೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ. ಮುಳ್ಳುಗಿಡಗಂಟೆಗಳು ಬೆಳೆಯದ ತೆರೆದ ಬಾವಿಗಳಲ್ಲಿ ಈಗಾಗಲೇ ಸ್ಥಳೀಯ ಯುವಕರು, ಈಜು ಪ್ರಿಯರು ಈಜಾಡಿ ಸಂಭ್ರಮಿಸುತ್ತಿದ್ದಾರೆ.

    ಮಾರಮ್ಮನಹಳ್ಳಿಯ ಹಳ್ಳದಲ್ಲಿ ನೀರು ಹರಿವು: ಈ ಭಾಗದಲ್ಲಿ ಮಳೆ ಬಂದು 40 ರಿಂದ 50 ದಿನಗಳೇ ಕಳೆದರೂ ಮಾರಮ್ಮನಹಳ್ಳಿ ಸಮೀಪದ ಹಳ್ಳದಲ್ಲಿ ಇನ್ನೂ ನೀರು ಹರಿಯುತ್ತಲೇ ಇದೆ. ಕಳೆದ ಎರಡ್ಮೂರು ತಿಂಗಳಿನಿಂದಲೂ ನಿರಂತರವಾಗಿ ಹಳ್ಳದಲ್ಲಿ ನೀರಿನ ಹರಿವು ಇದೆ. ನಾವು ಹುಡುಗರಾಗಿದ್ದಾಗ ಈ ರೀತಿ ಹಳ್ಳ ತುಂಬಿ ಹರಿಯುವುದನ್ನು ನೋಡಿದ್ದೆವು. ಅದರ ನಂತರ ಈಗ ನೋಡುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ 60 ವರ್ಷದ ವಿಭೂತಿ ಸೂರಯ್ಯ.

    ಈ ಭಾಗದ ಕಮರಾ ಅರಣ್ಯ ವ್ಯಾಪ್ತಿಯಲ್ಲಿನ ಉತ್ತಮ ಮಳೆ, ರಂಗಯ್ಯನದುರ್ಗ ಜಲಾಶಯದಲ್ಲಿ ನೀರಿನ ಸಂಗ್ರಹ ಅಂತರ್ಜಲ ಹೆಚ್ಚಳಕ್ಕೆ ಕಾರಣ. ಕಮರಾ ಅರಣ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ತಡೆವ ಕಾಮಗಾರಿಗಳಿಂದಲೂ ನೀರನ್ನು ಕಣ್ತುಂಬಿಕೊಳ್ಳುವಂತಾಗಿದೆ.
    ಎಸ್.ಬಿ. ಕರಿಬಸಪ್ಪ, ಗ್ರಾ.ಪಂ.ಅಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts