ಕ್ಷಯ ರೋಗಕ್ಕೆ ಇದೆ ಚಿಕಿತ್ಸೆ

ಕೊಂಡ್ಲಹಳ್ಳಿ: ಕ್ಷಯ ರೋಗಕ್ಕೆ ಸೂಕ್ತ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಟಿ.ಶಿವಕುಮಾರ್ ತಿಳಿಸಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನದಲ್ಲಿ ಮಾತನಾಡಿದರು.

ಎರಡು ವಾರಕ್ಕಿಂತ ಹೆಚ್ಚು ಕಾಲ ನಿರಂತರವಾಗಿರುವ ಕೆಮ್ಮು, ಕದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಎದೆ ನೋವು, ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆಯಾಗುವುದು, ಸಂಜೆ ವೇಳೆ ಮಾತ್ರ ಜ್ವರ ಕಾಣಿಸಿಕೊಳ್ಳ್ಳುವುದು ಕ್ಷಯ ರೋಗದ ಲಕ್ಷಣ ಎಂದು ತಿಳಿಸಿದರು.

ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ 6 ತಂಡ ರಚಿಸಲಾಗಿದೆ. ತಂಡದವರು ಆರೋಗ್ಯ ಕೇಂದ್ರ ವ್ಯಾಪ್ತಿ ಕೊಂಡ್ಲಹಳ್ಳಿ, ಎಸ್ಸಿ ಕಾಲನಿ, ಬೆಳವಿನಮರದಟ್ಟಿ, ಮಾರಮ್ಮನಹಳ್ಳಿ, ಕೋನಸಾಗರ ಗ್ರಾಮದಲ್ಲಿ ಗ್ರಾಮದಲ್ಲಿ ಈಗಾಗಲೇ ಗುರುತಿಸಿದ ಕ್ಷಯ ರೋಗ ಪೀಡಿತ ಪ್ರದೇಶದ ಒಟ್ಟು 670 ಮನೆಗೆ ಭೇಟಿ ನೀಡಲಿದ್ದಾರೆ. ರೋಗ ಶಂಕಿತರ ಕಫ ಸಂಗ್ರಹಿಸಿ ಪರೀಕ್ಷಿಸಲಾಗುವುದು ಎಂದರು.

ಕ್ಷಯ ರೋಗ ಪತ್ತೆಯಾದ ವ್ಯಕ್ತಿಗೆ ಸರ್ಕಾರದಿಂದ 6 ತಿಂಗಳ ಕಾಲ ಉಚಿತ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ಸೇವನೆಗೆ ಮಾಸಿಕ 500 ರೂ. ಸಹಾಯಧನ ನೀಡಲಾಗುತ್ತದೆ. ಈ ಆಂದೋಲನ ಜು.27ರ ವರೆಗೆ ನಡೆಯುತ್ತದೆ ಎಂದು ತಿಳಿಸಿದರು.

ಆಂದೋಲನಕ್ಕೆ ಗ್ರಾಪಂ ಅಧ್ಯಕ್ಷೆ ಈರಕ್ಕ ಚಾಲನೆ ನೀಡಿದರು. ಫಾರ‌್ಮಸಿಸ್ಟ್ ವೆಂಕಟೇಶ್ ನಾಯಕ್, ಆರೋಗ್ಯ ಸಹಾಯಕಿಯರಾದ ಮಾರುತಮ್ಮ, ಮಾಲಾಶ್ರೀ, ಸವಿತಾ, ಶೋಭಾ, ಜಿ.ಟಿ.ಕುಮಾರ್, ನವೀನ್ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Leave a Reply

Your email address will not be published. Required fields are marked *