ಶೋಕಿಗಾಗಿ ಸಾಲ ಪದ್ಧತಿ ಸಲ್ಲ

ಕೊಂಡ್ಲಹಳ್ಳಿ: ಸ್ವಸಹಾಯ ಸಂಘಗಳ ನೆರವಿನಿಂದ ಜೀವನದಲ್ಲಿ ಆರ್ಥಿಕ ಸಬಲತೆ ಸಾಧಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಂ.ದಿನೇಶ್‌ತಿಳಿಸಿದರು.

ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ 40 ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅನಗತ್ಯ ವೆಚ್ಚಗಳಿಗೆ ಹಾಗೂ ಶೋಕಿಗಾಗಿ ಸಾಲ ಮಾಡುವುದು ಸರಿಯಲ್ಲ. ದುಡಿಮೆಗೆ ಪೂರಕವಾದ ಸ್ವ ಉದ್ಯೋಗ ಸ್ಥಾಪನೆಗೆ ಸಾಲಬಳಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1.80 ಲಕ್ಷ ಸದಸ್ಯರ ಮೂಲಕ 19 ಸಾವಿರ ಸ್ವಸಹಾಯ ಸಂಘ ಸ್ಥಾಪಿಸಲಾಗಿದೆ. ಸಂಘ ಸ್ಥಾಪನೆ ಬದುಕು ಕಟ್ಟಿಕೊಳ್ಳಲು ಹೊರತು ಸಾಲ ಪಡೆಯುವುದಕ್ಕಲ್ಲ. ಆಪತ್ಕಾಲದಲ್ಲಿ ಸಂಘ ನೆರವು ಪಡೆದುಕೊಳ್ಳಬಹುದು ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಡಿ.ಷಡಕ್ಷರಪ್ಪ ಮಾತನಾಡಿ, ಪಡೆದ ಸಾಲ ಯೋಜಿತ ಉದ್ದೇಶಕ್ಕೆ ಬಳಕೆಯಾಗಬೇಕು. ಉಳಿತಾಯ ಪ್ರವೃತ್ತಿ ಜಾಗೃತವಾದರೆ ಕಷ್ಟನಷ್ಟಗಳಿಂದ ಚೇತರಿಸಿಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಈರಕ್ಕ, ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ಪ್ರಗತಿ ಬಂಧು ಸಂಘಗಳ ಒಕ್ಕೂಟದ ಅಧ್ಯಕ್ಷ ಶೇಖರ್, ಕೆ.ಎಸ್.ಕೃಷ್ಣಮೂರ್ತಿ, ವಲಯ ಮೇಲ್ವಿಚಾರಕ ಚನ್ನಬಸಪ್ಪ ಇತರರಿದ್ದರು.

Leave a Reply

Your email address will not be published. Required fields are marked *